ಇಡುಕ್ಕಿ: ಪರೋಟ ತಿಂದ ಬಳಿಕ ಫುಡ್ ಅಲರ್ಜಿಯಿಂದಾಗಿ ಪಿಯು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ.
ನಯನಮರಿಯಾ (16) ಮೃತ ವಿದ್ಯಾರ್ಥಿನಿ. ಈಕೆ ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ.ಪರೋಟ ತಿಂದ ಬಳಿಕ ಉಂಟಾದ ಅಲರ್ಜಿಗೆ ಇಡುಕ್ಕಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ವಾಜತೊಪ್ಪುವಿನ ಸೆಂಟ್ ಜಾರ್ಜ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.
ಮೈದಾ ಮತ್ತು ಗೋಧಿಯಿಂದ ಮಾಡಿದ ಆಹಾರಗಳನ್ನು ಸೇವಿಸಿದಾಗಲೆಲ್ಲ ನಯನಾಗೆ ಅಲರ್ಜಿ ಬರುತ್ತಿತ್ತಂತೆ. ಆದಾಗ್ಯೂ, ತುಂಬಾ ದಿನಗಳ ಬಳಿಕ ಇತ್ತೀಚೆಗಷ್ಟೇ ಮತ್ತೆ ಮೈದಾ ಅಥವಾ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸಿದ್ದಳು ಮತ್ತು ಆಕೆಗೆ ಏನೂ ಆಗಿರಲಿಲ್ಲ.
ಏನೂ ಆಗಲಿಲ್ಲ ಎಂಬ ನಂಬಿಕೆಯಿಂದಲೇ ಇತ್ತೀಚೆಗೆ ನಯನಾ ಮೈದಾದಿಂದ ಮಾಡಿ ಪರೋಟವನ್ನು ತಿಂದಿದ್ದಳು. ಬಳಿಕ ಅನಾರೋಗ್ಯದಿಂದ ಬಳಲಿದ ನಯನಾಳನ್ನು ಇಡುಕ್ಕಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಫೆ. 10) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ.