ನವದೆಹಲಿ: ಇಲ್ಲಿಯ ಮಂಡೋಲಿ ಜೈಲಿನಲ್ಲಿರುವ, ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಂದ ಜೈಲು ಧಿಕಾರಿಗಳು ₹1.5 ಲಕ್ಷ ಮೊತ್ತದ ಗುಸ್ಸಿ ಚಪ್ಪಲಿ ಮತ್ತು ₹80 ಸಾವಿರ ಬೆಲೆಯ ಎರಡು ಜೀನ್ಸ್ ಪ್ಯಾಂಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕಾರಾಗೃಹ ಇಲಾಖೆ ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ಜೈಲಿನೊಳಗೆ ದಾಳಿ ನಡೆಸಿತ್ತು ಎಂದೂ ಅವರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ವೇಳೆ ಆರೋಪಿ ಚಂದ್ರಶೇಖರ್ ಜೈಲರ್ ದೀಪಕ್ ಶರ್ಮಾ ಎದುರು ಅಳುವ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳ ಹೆಸರಿನಲ್ಲಿ ಮಾಜಿ ರೆಲಿಗೇರ್ ಪ್ರಮೋಟರ್ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಹಣ ಅಕ್ರಮ ವರ್ಗಾವಣೆಯ ಮೂಲಕ ವಂಚಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಿತ್ತು.