ಮಧ್ಯಪ್ರದೇಶ: ಅಂಕಪಟ್ಟಿ ನೀಡಲು ವಿಳಂಬ ಮಾಡಿದ ಪ್ರಾಂಶುಪಾಲೆಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿ ಕೊಂದಿರುವ ಘಟನೆ ಇಂದೋರ್ನಲ್ಲಿ ನಡೆದಿದೆ.
ವಿಮುಕ್ತ ಶರ್ಮಾ ಮೃತ ದುರ್ದೈವಿ. ಅಶುಹೋಶ್ ಶ್ರೀವಾಸ್ತವ್ ಆರೋಪಿಯಾಗಿದ್ದಾನೆ.
ಇಂದೋರ್ ಕಾಲೇಜಿನಲ್ಲಿ ಅಂಕಪಟ್ಟಿ ನೀಡಲು ವಿಳಂಬವಾದ ಹಿನ್ನೆಲೆ ಪ್ರಾಂಶುಪಾಲೆ ವಿದ್ಯಾರ್ಥಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಫೆಬ್ರವರಿ 20 ರಂದು ಸಿಮ್ರೋಲ್ ಪ್ರದೇಶದಲ್ಲಿ, ಬಿಫಾರ್ಮ್ ಅಂಕಪಟ್ಟಿ ಇನ್ನೂ ನೀಡಿಲ್ಲ ಎಂದು ಆರೋಪಿಸಿದ ಶ್ರೀವಾಸ್ತವ್, ಪ್ರಾಂಶುಪಾಲೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕಾಲೇಜು ಸಹೋದ್ಯೋಗಿಗಳು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಂಶುಪಾಲೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.
'ವಿದ್ಯಾರ್ಥಿ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಿ ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಎರಡು ಮೂರು ದೂರುಗಳನ್ನು ನೀಡಿರುವುದು ನಮಗೆ ಕಂಡುಬಂದಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮುಕ್ತ ಶರ್ಮಾ ಅವರಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಶ್ರೀವಾಸ್ತವ್ಗೆ ಸುಟ್ಟ ಗಾಯಗಳಾಗಿವೆ. ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.