ನವದೆಹಲಿ: ಅದಾನಿ ಗುಂಪಿನ ಶೇರುಗಳ ಕುಸಿತ ಮತ್ತು ಈ ಬಿಕ್ಕಟ್ಟನ್ನು ನಿಭಾಯಿಸಲುಅದು ಹೊಂದಿರುವ ಯೋಜನೆಯ ಬಗ್ಗೆ ತಾನು ವಿವರಣೆ ಕೇಳುವುದಾಗಿ ಭಾರತೀಯ ಜೀವವಿಮಾ ನಿಗಮ (LIC) ಗುರುವಾರ ಹೇಳಿದೆ.
ಅದಾನಿ ಗುಂಪಿನ ಕಂಪೆನಿಗಳಲ್ಲಿ ಎಲ್‌ಐಸಿ ಹೊಂದಿರುವ ಶೇರುಗಳ ಪ್ರಮಾಣ 2020 ಸೆಪ್ಟಂಬರ್ ಬಳಿಕ 10 ಪಟ್ಟು ಹೆಚ್ಚಾಗಿದೆ.ಅದಾನಿ ಗುಂಪಿನ ಕಂಪೆನಿಗಳಲ್ಲಿ ಇಡೀ ವಿಮಾ ಉದ್ದಿಮೆ ಮಾಡಿರುವ ಹೂಡಿಕೆಗಳ ಪೈಕಿ 98 ಶೇಕಡಕ್ಕೂಅಧಿಕ ಸರಕಾರಿ ಒಡೆತನದ ಎಲ್‌ಐಸಿಯದ್ದೇ ಆಗಿದೆ.
ಅದಾನಿ ಗುಂಪು ಕೃತಕವಾಗಿ ಬೆಲೆ ಹೆಚ್ಚಿಸಲಾದ ತನ್ನ ಶೇರುಗಳನ್ನು ಅಡವಿಟ್ಟು ಅಗಾಧ ಪ್ರಮಾಣದ ಸಾಲಗಳನ್ನು ಪಡೆದು ಕೊಂಡಿದೆ ಮತ್ತು ಅದು ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂಬುದಾಗಿ ಜನವರಿ 24 ರಂದು ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಕಂಪೆನಿಯ ವರದಿಯೊಂದು ಆರೋಪಿಸಿದ ಬಳಿಕ ಗುಂಪಿನ ಶೇರುಗಳು ಅಗಾಧ ಪ್ರಮಾಣದಲ್ಲಿ ಕುಸಿದಿವೆ. ಅದು ಈವರೆಗೆ ತನ್ನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 9 ಲಕ್ಷಕೋಟಿ ರೂ.ಯನ್ನು ಕಳೆದು ಕೊಂಡಿದೆ ಎನ್ನಲಾಗಿದೆ.
ಎಲ್‌ಐಸಿಯು ಶೀಘ್ರದಲ್ಲೇ ಅದಾನಿ ಗುಂಪನ್ನು ಸಂಪರ್ಕಿಸುವುದು ಎಂದು ಅದರ ಅಧ್ಯಕ್ಷ ಎಮ್.ಆರ್. ಕುಮಾರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಶೇರು ಮಾರುಕಟ್ಟೆಯಲ್ಲಿ ಮತ್ತು ಅದಾನಿ ಗುಂಪಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಲು ಬಯಸುತ್ತೇವೆ. ಅವರು ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ತಿಳಿಯಲು ನಾವು ಶೀಘ್ರದಲ್ಲೇ ಅವರನ್ನು ಸಂಪರ್ಕಿಸುತ್ತೇವೆ ಎಂದು ಅವರು ನುಡಿದರು.