ಮಲಪ್ಪುರಂ: ಸಂಬಂಧಿ ಯುವಕನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯೊಬ್ಬಳು ಮನನೊಂದು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಕೇರಳದ ಮೆಲತ್ತೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಮುಹಮ್ಮದ್ ರಫೀಕ್ (21) ಎಂದು ಗುರುತಿಸಲಾಗಿದೆ.
ಈತ ಚೆರ್ಪಲಸ್ಸೆರಿಯಲ್ಲಿರುವ ನೆಲ್ಲಯಾ ಪೊಟ್ಟಚಿರಾ ಮೂಲದ ನಿವಾಸಿ. 13 ವರ್ಷದ ತನ್ನ ಸಂಬಂಧಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಅಪ್ರಾಪ್ತೆ ಜನವರಿ 12ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರಂಭದಲ್ಲಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿತ್ತು. ಬಳಿಕ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಅನೇಕ ಬಾರಿಗೆ ಬಾಲಕಿಯ ಮನೆಗೆ ಬರುತ್ತಿದ್ದ ರಫೀಕ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದ ಮನನೊಂದು ಬಾಲಕಿ ಸಾವಿನ ಹಾದಿ ಹಿಡಿದಿದ್ದಾಳೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.