ಜಿನೇವಾ: ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ಭಾಗವಹಿಸಿದ್ದರು ಎನ್ನಲಾಗಿದೆ.
ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸ್ವಘೋಷಿತ ದೇವಮಾನವ, ಕಾಲ್ಪನಿಕ ʼಕೈಲಾಸʼ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ನಿತ್ಯಾನಂದ ತನ್ನ ದ್ವೀಪವನ್ನು ʼಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼ ಎಂದು ಕರೆದುಕೊಂಡಿದ್ದಾನೆ. ಈ ದ್ವೀಪಕ್ಕೆ ವಿಶ್ವಸಂಸ್ಥೆ ರಾಷ್ಟ್ರದ ಸ್ಥಾನಮಾನ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈತನ ದ್ವೀಪ ಎಲ್ಲಿದೆ ಎಂಬುದೂ ಖಚಿತವಾಗಿಲ್ಲ.
ಅತ್ಯಾಚಾರ ಆರೋಪ ಹೊತ್ತು ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿರುವ ವಿಜಯಪ್ರಿಯಾ ನಿತ್ಯಾನಂದ ಎಂಬಾಕೆ, ಹಿಂದೂಧರ್ಮದ ಸುಪ್ರೀಂ ಗುರುವಾಗಿರುವ ನಿತ್ಯಾನಂದ ಭಾರತದಿಂದ ಕಿರುಕುಳ, ಅತ್ಯಾಚಾರ ಆರೋಪ ಅನುಭವಿಸುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು ಎಂದು ವಾದಿಸಿದ್ದಾಳಂತೆ.
ಜೀವನದ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಶಿಕ್ಷಣ, ವೈದ್ಯಕೀಯ ಆರೈಕೆ, ಇವೆಲ್ಲವನ್ನೂ ಎಲ್ಲಾ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಆಕೆ ಹೇಳಿದ್ದಾರೆ.
2019ರಲ್ಲಿ ಈತ ಭಾರತ ಬಿಟ್ಟು ಪರಾರಿಯಾಗಿದ್ದ. ಅದಕ್ಕೆ ಮುನ್ನ ಇಲ್ಲಿ ಹಲವಾರು ಕಡೆ ಆಶ್ರಮಗಳನ್ನು ನಡೆಸುತ್ತಿದ್ದ ಈತನ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಮಕ್ಕಳ ಅಪಹರಣ ಮುಂತಾದ ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ಕರ್ನಾಟಕದ ಕೋರ್ಟ್ ಈತನಿಗೆ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.