HEALTH TIPS

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ತಾಯಿ, ಮಗಳು ಸಜೀವ ದಹನ

Top Post Ad

Click to join Samarasasudhi Official Whatsapp Group

Qries

 

              ಲಖನೌ: ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ತಾಯಿ ಮತ್ತು ಮಗಳು ಸಜೀವ ದಹನಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ದೆಹಾತ್‌ ಜಿಲ್ಲೆಯಲ್ಲಿ ನಡೆದಿದೆ.

                          ಮೃತರನ್ನು ಪ್ರಮಿಳಾ ದೀಕ್ಷಿತ್‌ (45) ಮತ್ತು ಶಿವಿ (20) ಎಂದು ಗುರುತಿಸಲಾಗಿದೆ.

                     'ಪ್ರಕರಣ ಸಂಬಂಧ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಗ್ಯಾನೇಶ್ವರ್‌ ಪ್ರಸಾದ್‌ ಮತ್ತು ನಾಲ್ವರು ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಒಟ್ಟು 39 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸ್‌ ಮಹಾ ನಿರ್ದೇಶಕ (ಕಾನ್ಪುರ ವಲಯ) ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

                   'ಈವರೆಗೆ ಕಂದಾಯ ಅಧಿಕಾರಿ ಅಶೋಕ್‌ ಸಿಂಗ್‌ ಮತ್ತು ಬುಲ್ಡೋಜರ್ ಚಾಲಕ ದೀಪಕ್ ಅವರನ್ನು ಬಂಧಿಸಲಾಗಿದೆ. ಗುಡಿಸಲು ತೆರವಿಗೆ ಬಳಸಿದ್ದ ಬುಲ್ಡೋಜರ್‌ ವಶಕ್ಕೆ ಪಡೆಯಲಾಗಿದೆ' ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮೂರ್ತಿ ತಿಳಿಸಿದ್ದಾರೆ.

                      'ಪಂಚಾಯಿತಿ ಜಾಗದಲ್ಲಿದ್ದ ಅಕ್ರಮ ಗುಡಿಸಲು ತೆರವುಗೊಳಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ತಾಯಿ ಮತ್ತು ಮಗಳು ಗುಡಿಸಲಿನ ಒಳಗೆ ಇದ್ದರು. ಈ ವೇಳೆ ಎಸ್‌ಡಿಎಂ ಮತ್ತು ಕಂದಾಯ ಅಧಿಕಾರಿಗಳ ಆದೇಶದ ಮೇರೆಗೆ ಗುಡಿಸಲಿಗೆ ಬೆಂಕಿ ಹಾಕಲಾಯಿತು' ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

                     ಪ್ರಮಿಳಾ ಮತ್ತು ಶಿವಿ ಅವರು ಬೆಂಕಿ ಹೊತ್ತಿಕೊಂಡ ಗುಡಿಸಲಿನ ಒಳಗೆ ಕಿರುಚಾಡುತ್ತಿರುವ ಮತ್ತು ಅಧಿಕಾರಿಗಳು ನೋಡುತ್ತಾ ಹೊರಗೆ ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

                                           ಸಂತ್ರಸ್ತರ ಭೇಟಿಗೆ ವಿರೋಧ ಪಕ್ಷಗಳು ಸಜ್ಜು

                 ಘಟನೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಕ್ರಮ ಕಟ್ಟಡಗಳ ತೆರವಿಗೆ ಬುಲ್ಡೋಜರ್‌ ಬಳಸುವ ಮೂಲಕ ಬಿಜೆಪಿ ಸರ್ಕಾರ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂದು ಆರೋಪಿಸಿವೆ.

                      ಈ ಮಧ್ಯೆ ವಿರೋಧ ಪಕ್ಷಗಳು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಮುಂದಾಗಿವೆ. ಆದರೆ ಗ್ರಾಮಕ್ಕೆ ಪ್ರವೇಶಿಸಲು ಅಧಿಕಾರಿಗಳು ನಿರ್ಬಂಧ ವಿಧಿಸಿ, ಹಲವು ನಾಯಕರನ್ನು ಬಂಧಿಸಿದ್ದಾರೆ. ಗ್ರಾಮದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

                   ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, 'ಅಧಿಕಾರದ ದುರಹಂಕಾರವು ಜನರ ಬದುಕುವ ಹಕ್ಕನ್ನು ಕಸಿದುಕೊಂಡರೆ ಅದನ್ನು ಸರ್ವಾಧಿಕಾರ ಎಂದು ಕರೆಯಲಾಗುತ್ತದೆ. ಬುಲ್ಡೋಜರ್‌ ನೀತಿಯು ಸರ್ಕಾರದ ಕ್ರೂರ ಮುಖವನ್ನು ಹೊರಹಾಕುತ್ತಿದೆ. ಭಾರತ ಇದನ್ನು ಒಪ್ಪುವುದಿಲ್ಲ' ಎಂದು ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.

                    'ಈ ಹೃದಯ ವಿದ್ರಾವಕ ಘಟನೆಯನ್ನು ಖಂಡಿಸುತ್ತೇನೆ. ಇಂಥ ಅಮಾನವೀಯ ಕೃತ್ಯದ ವಿರುದ್ಧ ನಾವು ಧ್ವನಿ ಎತ್ತಲೇಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆಪಾದಿತರಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಆಗ್ರಹಿಸಿ ಟ್ವೀಟ್‌ ಮಾಡಿದ್ದಾರೆ.

                'ಘಟನೆಯು ಬಿಜೆಪಿಯ ನಿಜವಾದ ಮುಖವನ್ನು ಬಹಿರಂಗಪಡಿಸಿದೆ. ಬೇಟಿ ಬಚಾವೊ ಬರೀ ಘೋಷಣೆಗಷ್ಟೇ ಸೀಮಿತವಾಗಿದೆ' ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್‌ ಸಿಂಗ್‌ ಯಾದವ್‌ ಹರಿಹಾಯ್ದಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries