ಮುಂಬೈ: ಮಾರ್ಚ್ 4 ರಂದು ಮುಂಬೈನಲ್ಲಿ ಪ್ರಾರಂಭವಾಗುವ ಮಹಿಳಾ ಪ್ರೀಮಿಯರ್ ಲೀಗ್‌ನ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳನ್ನು ಟಾಟಾ ಗ್ರೂಪ್ ಮಂಗಳವಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಡಬ್ಯೂಪಿಎಲ್ ಟೈಟಲ್ ಪ್ರಾಯೋಜಕರಾಗಿ ಟಾಟಾ ಗ್ರೂಪ್ ನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಅವರ ಬೆಂಬಲದೊಂದಿಗೆ ಮಹಿಳಾ ಕ್ರಿಕೆಟ್ ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಎಂಬ ವಿಶ್ವಾಸ ನಮಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಒಪ್ಪಂದದ ಹಣಕಾಸು ವಿವರ ಬಹಿರಂಗಗೊಂಡಿಲ್ಲ. ಐದು ವರ್ಷಗಳ ಹಕ್ಕುಗಳನ್ನು ಟಾಟಾ ಪಡೆದುಕೊಂಡಿದ್ದಾರೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ಆವೃತ್ತಿಯು ಮುಂಬೈನಲ್ಲಿ ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐಗೆ 951 ಕೋಟಿ ರೂ. ಬಂದಿದೆ. ಐದು ತಂಡಗಳು 4700 ಕೋಟಿ ರೂ.ಗೆ ಮಾರಾಟವಾಗಿವೆ. ಈ ತಿಂಗಳ ಆರಂಭದಲ್ಲಿ ನಡೆದ ಹರಾಜಿನಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 3.40 ಕೋಟಿ ರೂ. ಗೆ ಖರೀದಿಸಲಾಗಿತ್ತು.