ಶ್ರೀನಗರ: ಪ್ರಮುಖ ಬೆಳವಣಿಗೆಯಲ್ಲಿ, ಭಯೋತ್ಪಾದನೆ ಪೀಡಿತ ಕಾಶ್ಮೀರದಲ್ಲಿ ಖಾಸಗಿ ಹೂಡಿಕೆಯನ್ನು ಆರಂಭಿಸಿರುವ ಸಜ್ಜನ್ ಜಿಂದಾಲ್ ನೇತೃತ್ವದ ಜೆಎಸ್‌ಡಬ್ಲ್ಯೂ ಸ್ಟೀಲ್ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಉಕ್ಕಿನ ಸ್ಥಾವರಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದೆ.
"ಕಾಶ್ಮೀರದ ಹೃದಯಭಾಗವಾದ ಪುಲ್ವಾಮಾದಲ್ಲಿ ನಮ್ಮ ಹೊಸ ಸ್ಟೀಲ್ ಪ್ರೊಸೆಸಿಂಗ್ ಘಟಕಕ್ಕೆ ನಾವು ಇಂದು ಅಡಿಪಾಯ ಹಾಕಿದ್ದೇವೆ ಎಂದು ಘೋಷಿಸಲು ಸಂತೋಷವಾಗುತ್ತಿದೆ! ಸುಂದರ ಜಮ್ಮು ಕಾಶ್ಮೀರದ ಬೆಳವಣಿಗೆಗೆ JSW ಸ್ಟೀಲ್ ತನ್ನ ಕೊಡುಗೆ ನೀಡುತ್ತಿದೆ ಎಂದು ಜೆಎಸ್‌ಡಬ್ಲ್ಯು ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಅವರು ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾದಲ್ಲಿ ಉಕ್ಕಿನ ಸ್ಥಾವರದ ಶಂಕುಸ್ಥಾಪನೆ ಸಮಾರಂಭದ ಚಿತ್ರಗಳನ್ನು ಜಿಂದಾಲ್ ಅವರು ಟ್ವೀಟ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಜೆಎಸ್‌ಡಬ್ಲ್ಯು ಕಾಶ್ಮೀರದಲ್ಲಿ ಹೂಡಿಕೆ ಮತ್ತು ಕೆಲಸವನ್ನು ಪ್ರಾರಂಭಿಸಿದ ಮೊದಲ ಗ್ರೂಪ್ ಆಗಿದೆ. ಪುಲ್ವಾಮಾದ ಲಾಸ್ಸಿಪೋರಾ ಕೈಗಾರಿಕಾ ಪ್ರದೇಶದಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿರುವ 70 ಕನಾಲ್ (8.75 ಎಕರೆ) ಭೂಮಿಯಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ.