ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ರವಿವಾರ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ ತಾನು ಯುಎಇ (UAE) ನಲ್ಲಿರುವ ತನ್ನ ಅಲ್ ಐನ್ (Al Ain) ಶಾಖೆಯನ್ನು ಮುಚ್ಚುವ ಕುರಿತಂತೆ ವಾಣಿಜ್ಯಕ ನಿರ್ಧಾರ ಕೈಗೊಂಡಿರುವುದಾಗಿ ಹೇಳಿರುವುದು ಭಾರೀ ಸಂಚಲನ ಸೃಷ್ಟಿಸಿರುವ ನಡುವೆ ಬ್ಯಾಂಕ್ ಸ್ಪಷ್ಟೀಕರಣ ನೀಡಿ ಈ ಶಾಖೆ ಮುಚ್ಚುವ ನಿರ್ಧಾರವನ್ನು ಕಳೆದ ವರ್ಷವೇ ಕೈಗೊಂಡಿರುವುದಾಗಿ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಾ ಅದಾನಿ ಕಂಪೆನಿಗಳಿಗೆ ಇನ್ನೂ ಸಾಲ ನೀಡುವುದು ಎಂದು ಬ್ಯಾಂಕಿನ ಸಿಇಒ ಸಂಜೀವ್ ಛಡ್ಡಾ ಅವರು ಹೇಳಿಕೆ ನೀಡಿದ ನಂತರ ಗ್ರಾಹಕರು ಯುಎಇ ಯಲ್ಲಿನ ಅಲ್ ಐನ್ ಶಾಖೆಗೆ ಧಾವಿಸಿ ಅಲ್ಲಿ ಸರತಿ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಬ್ಯಾಂಕಿನ ಸ್ಪಷ್ಟೀಕರಣ ಬಂದಿದೆಯಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಗಳು ಆಧಾರರಹಿತ ಎಂದು ಹೇಳಿದೆಯಲ್ಲದೆ ಅವುಗಳನ್ನು ನಂಬದಂತೆಯೂ ಸೂಚಿಸಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಯುಎಇ ನೀಡಿದ ಅನುಮತಿಯ ಅನುಸಾರ ಮಾರ್ಚ್ 22, 2023 ರಿಂದ ಅನ್ವಯವಾಗುವಂತೆ ಅಲ್ ಐನ್ ಶಾಖೆ ಮುಚ್ಚಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಸುಗಮ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಅಲ್ ಐನ್ ಶಾಖೆಯಲ್ಲಿರುವ ಎಲ್ಲಾ ಗ್ರಾಹಕರ ಖಾತೆಗಳನ್ನು ಬ್ಯಾಂಕ್‌ನ ಅಬು ಧಾಬಿ ಶಾಖೆಗೆ ವರ್ಗಾಯಿಸಲಾಗುವುದೆಂದೂ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತಮ್ಮ ಅಲ್ ಐನ್ ಶಾಖೆಯ ಖಾತೆಗಳನ್ನು ಮುಚ್ಚಲು ಬಯಸುವ ಗ್ರಾಹಕರು ಮಾರ್ಚ್ 22, 2023 ರೊಳಗೆ ಮಾಡಬಹುದು ಹಾಗೂ ಇದಕ್ಕೆ ಯಾವುದೇ ಶುಲ್ಕ ಅಥವಾ ದಂಡ ವಿಧಿಸಲಾಗುವುದಿಲ್ಲ ಎಂದೂ ಬ್ಯಾಂಕ್ ತಿಳಿಸಿದೆಯಲ್ಲದೆ ಗ್ರಾಹಕರು ಅಲ್ ಐನ್ ಶಾಖೆಗೆ ಭೇಟಿ ನೀಡಿ ತಮ್ಮ ಖಾತೆಗೆ ಸಂಬಂಧಿಸಿದಂತೆ ಸಮ್ಮತಿ/ಸೂಚನೆಗಳನ್ನು ನೀಡುವಂತೆಯೂ ಬ್ಯಾಂಕ್ ಸೂಚಿಸಿದೆ.