ನವದೆಹಲಿ: ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾಗಿದ್ದ ಧರ್ಮಶಾಲಾ ಕ್ರೀಡಾಂಗಣವನ್ನು ಪಂದ್ಯ ಆಯೋಜನೆಯಿಂದ ಕೈ ಬಿಡಲಾಗಿದ್ದು, ನೂತನ ಕ್ರೀಡಾಂಗಣಕ್ಕಾಗೆ ಚರ್ಚೆ ಆರಂಭವಾಗಿದೆ ಎಂದು ಹೇಳಲಾಗಿದೆ.
ಇದೇ ಮಾರ್ಚ್ 1 ರಿಂದ 5 ರವರೆಗೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಡೆಯುತ್ತಿರುವ ಸರಣಿಯ ಮೂರನೇ ಟೆಸ್ಟ್ ಪಂದ್ಯ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕ್ರೀಡಾಂಗಣದ ರಿಲೇಯ್ಡ್ ಔಟ್‌ಫೀಲ್ಡ್ ಸಿದ್ಧವಾಗಿಲ್ಲದ ಕಾರಣ ಮತ್ತೊಂದು ಕ್ರೀಡಾಂಗಣಕ್ಕೆ ಪಂದ್ಯ ಸ್ಥಳಾಂತರಿಸಲು ಬಿಸಿಸಿಐ ಸಿದ್ಧವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ (HPCA) ಸ್ಟೇಡಿಯಂನಲ್ಲಿ ನಡೆದ ಇತ್ತೀಚಿನ ನವೀಕರಣದ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಮೈದಾನವು ಇನ್ನೂ ಯೋಗ್ಯವಾಗಿಲ್ಲ ಮತ್ತು ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಸಿದ್ಧಪಡಿಸುವುದು ಅಸಾಧ್ಯವಾದ ಕಾರಣ ಸ್ಥಳಾಂತರಿಸಲಾದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣಕ್ಕೆ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ ಕುರಿತು ಅವರು ಅಂತಿಮ ವರದಿ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಅವರು ಈಗಾಗಲೇ ತಮ್ಮ ವರದಿಯನ್ನು ಬಿಸಿಸಿಐನ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. "ಪಂದ್ಯವನ್ನು ಆಯೋಜಿಸಲು ಕೆಲವು BCCI ನಿಯತಾಂಕಗಳು ಹೊಂದಿಕೆಯಾಗಬೇಕು. ಈ ಮೈದಾನದಲ್ಲಿ ಯಾವುದೇ ಸ್ಪರ್ಧಾತ್ಮಕ ಆಟವನ್ನು ಆಡಲಾಗಿಲ್ಲ ಮತ್ತು ಔಟ್‌ಫೀಲ್ಡ್ ಸಿದ್ಧವಾಗಿಲ್ಲ" ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ. ಕ್ರೀಡಾಂಗಣದ ಸಿದ್ದತೆ ಮಾತ್ರವಲ್ಲದೇ ಹವಾಮಾನ ಕೂಡ ಕ್ರೀಡಾಂಗಣ ಬದಲಾವಣೆಗೆ ಕಾರಣ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಇದ್ದು ಇದೂ ಕೂಡ ಟೂರ್ನಿ ಆಯೋಜಕರಿಗೆ ತಲೆನೋವಾಗುವ ಸಾಧ್ಯತೆ ಇದೆ.
"ನಾವು ಪಂದ್ಯವನ್ನು ಆಯೋಜಿಸಲು ಬಯಸುತ್ತೇವೆ ಎಂದು ನಾವು ಹೇಳಿದ್ದೇವೆ.. ಆದರೆ ಅದನ್ನು ನಿರ್ಧರಿಸುವುದು ಬಿಸಿಸಿಐ..ಕ್ಯುರೇಟರ್ ವರದಿಯು ನಿಯತಾಂಕಗಳನ್ನು ಆಧರಿಸಿದೆ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದೆ. ಏಕೆಂದರೆ ಇದು ವೇಗಿಗಳಿಗೆ ಅನುಕೂಲಕರವಾದ ಟ್ರ್ಯಾಕ್ ಮತ್ತು ಕ್ರಿಕೆಟ್ ಪ್ರವಾಸೋದ್ಯಮಕ್ಕೆ ಸೂಕ್ತವಾದ ತಾಣವಾಗಿದೆ ಎಂದು ಪರಿಗಣಿಸಲಾಗಿದೆ. ಕೆಲ ವಾರಗಳ ಹಿಂದೆ ಬಿಸಿಸಿಐ ತಂಡವೂ ಸ್ಥಳ ಪರಿಶೀಲನೆ ನಡೆಸಿತ್ತು. ಆದರೆ ಮೈದಾನ ಇನ್ನೂ ಸಿದ್ಧವಾಗಿಲ್ಲದ ಕಾರಣ ಪಂದ್ಯ ಆಯೋಜನೆ ಸ್ಥಳಾಂತರಿಸಲಾಗಿದೆ.
ಬದಲಿ ಕ್ರೀಡಾಂಗಣಕ್ಕೆ ಚರ್ಚೆ, ಚಿನ್ನಸ್ವಾಮಿ ಕ್ರೀಡಾಂಗಣ ಪಟ್ಟಿಯಲ್ಲಿ
ಧರ್ಮಶಾಲಾ ಮೈದಾನದಿಂದ ಮೂರನೇ ಪಂದ್ಯ ಸ್ಥಳಾಂತರವಾಗಿದ್ದು, ಬದಲಿ
ಕ್ರೀಡಾಂಗಣಗಳತ್ತ ಬಿಸಿಸಿಐ ಚಿತ್ತ ಹರಿಸಿದೆ. ಈ ಪಟ್ಟಿಯಲ್ಲಿ ಇದೀಗ 2 ಪ್ರಮುಖ
ಕ್ರೀಡಾಂಗಣಗಳ ಹೆಸರು ಕೇಳಿಬರುತ್ತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಅಥವಾ ವಿಶಾಖಪಟ್ಟಣಂಗೆ ಪಂದ್ಯ ಸ್ಥಳಾಂತರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಧರ್ಮಶಾಲಾದಿಂದ ಪಂದ್ಯವನ್ನು ಸ್ಥಳಾಂತರ ಅಲ್ಲಿ ವಿಶ್ವ ದರ್ಜೆಯ ಟೆಸ್ಟ್ ಪಂದ್ಯಕ್ಕಾಗಿ ಹಾತೊರೆಯುತ್ತಿರುವ ಸಾವಿರಾರು ಅಭಿಮಾನಿಗಳನ್ನು ನಿರಾಶೆಗೊಳಿದೆ.