ನವದೆಹಲಿ
:ಯೂಟ್ಯೂಬ್‌ನಲ್ಲಿ ದಾರಿ ತಪ್ಪಿಸುವ ವಿಡಿಯೊ ಅಪ್ಲೋಡ್ ಮಾಡಿದ ಆರೋಪದಲ್ಲಿ ನಟ ಅರ್ಷದ್ ವಾರ್ಸಿ, ಆತನ ಪತ್ನಿ ಮಾರಿಯಾ ಸೇರಿದಂತೆ ಹಲವಾರು ಮಂದಿಗೆ ಭಾರತೀಯ ಶೇರುಗಳು ಮತ್ತು ವಿನಿಮಯ ಮಂಡಳಿಯು ಹತ್ತು ದಿನಗಳ ನಿಷೇಧ ಹೇರಿದೆ ಎಂದು ndtv.com ವರದಿ ಮಾಡಿದೆ.
ಈ ನಿಷೇಧವನ್ನು 45 ಮಂದಿಯ ವಿರುದ್ಧ ಹೇರಲಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಲ್ಪಟ್ಟಿರುವ ಮಂದಿಗಳ ಪೈಕಿ ನಟ ಅರ್ಷದ್ ವಾರ್ಸಿ ಹಾಗೂ ಆತನ ಪತ್ನಿ ಮಾರಿಯಾ ಗೊರೆಟ್ಟಿ ಕೂಡಾ ಸೇರಿದ್ದಾರೆ.
ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಹಾಗೂ ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್‌ಗಳು ಯೂಟ್ಯೂಬ್ ಚಾನೆಲ್‌ನಲ್ಲಿ ದಾರಿ ತಪ್ಪಿಸುವ ವಿಡಿಯೊಗಳನ್ನು ಅಪ್ಲೋಡ್ ಮಾಡುವ ಮೂಲಕ ಶೇರು ದರವನ್ನು ತಿರುಚಿವೆ ಎಂಬ ಆರೋಪದ ಕುರಿತು ನಡೆದ ತನಿಖೆಯ ನಂತರ ಈ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ನಿಷೇಧಿಸುವ ನಿರ್ಣಯಕ್ಕೆ ಬರಲಾಗಿದೆ.
ಅಸಾಧಾರಣ ಲಾಭ ದೊರೆಯುವುದರಿಂದ ಈ ಎರಡು ಸಂಸ್ಥೆಗಳ ಶೇರು ಖರೀದಿಸುವಂತೆ ಹೂಡಿಕೆದಾರರಿಗೆ ಶಿಫಾರಸು ಮಾಡುವ ವಿಡಿಯೊಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ಅಪ್ಲೋಡ್ ಮಾಡಿರುವ ಸಂಗತಿಯನ್ನು ಸೆಬಿ ಪತ್ತೆ ಹಚ್ಚಿದೆ.
ಸೆಬಿಯು 'The Advisor' ಹಾಗೂ 'Moneywise' ಚಾನೆಲ್‌ಗಳಲ್ಲಿ ತಪ್ಪು ಮಾಹಿತಿ ಹೊಂದಿರುವ ವಿಡಿಯೊಗಳನ್ನು ಮೂರು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವ ಸಂಗತಿಯನ್ನೂ ಪತ್ತೆ ಹಚ್ಚಿತ್ತು. ಈ ತಪ್ಪು ಮಾಹಿತಿಯ ತುಣುಕನ್ನು ಶೇರು ಬೆಲೆಯನ್ನು ಕೃತಕವಾಗಿ ಏರಿಕೆ ಮಾಡಲು ಬಿಡುಗಡೆ ಮಾಡಲಾಗಿತ್ತು ಹಾಗೂ ವಾರ್ಸಿ ಮತ್ತಿತರರು ಹೆಚ್ಚುವರಿ ಬೆಲೆಗೆ ಈ ಶೇರುಗಳನ್ನು ಖರೀದಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ನಟ ಅರ್ಷದ್ ವಾರ್ಸಿ, "ನಾನು ಮತ್ತು ನನ್ನ ಪತ್ನಿ ಇಬ್ಬರೂ ಶೇರು ವ್ಯವಹಾರದ ಬಗ್ಗೆ ಶೂನ್ಯ ಅರಿವು ಹೊಂದಿದ್ದೇವೆ. ನಾವು ಶೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದೇವೆ" ಎಂದು ಪ್ರತಿಕ್ರಿಯಿಸಿದ್ದಾರೆ.