ನವದೆಹಲಿ: 'ಮೇ 10ರಂದು ಒಂದು ಲೋಕಸಭಾ ಕ್ಷೇತ್ರ ಹಾಗೂ ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ' ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಬುಧವಾರ ತಿಳಿಸಿದ್ದಾರೆ. ಈ ಉಪಚುನಾವಣೆಗಳ ಮತ ಎಣಿಕೆ ಮೇ 13ರಂದು ನಡೆಯಲಿದೆ.
ಎಲ್ಲೆಲ್ಲಿ ಚುನಾವಣೆ: ಸಂಸದ ಸಂತೋಖ್ ಸಿಂಗ್ ಚೌಧರಿ ಅವರು ಕಳೆದ ಜನವರಿಯಲ್ಲಿ ಭಾರತ್ ಜೊಡೊ ಯಾತ್ರೆ ವೇಳೆ ಹೃದಯಾಘಾತದಿಂದ ನಿಧನರಾದ ಕಾರಣ ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದಲ್ಲಿ ಈಗ ಉಪಚುನಾವಣೆ ನಡೆಯಲಿದೆ.
ಒಡಿಶಾದ ಝರ್ಸುಗುಡ ವಿಧಾನಸಭಾ ಕ್ಷೇತ್ರ, ಉತ್ತರ ಪ್ರದೇಶದ ಸುವಾರ್, ಛನ್‌ಬೇ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.
ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ, ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ (ಯುಡಿಪಿ) ಅಭ್ಯರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಸೋಹಿಯಾಂಗ್ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮೇ 10ರಂದು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.