ನವದೆಹಲಿ :ಜಾಗತಿಕ ಆರ್ಥಿಕ ಹಿಂಜರಿತದ ನಂತರದ ಬಹು ದೊಡ್ಡ ಚಿಲ್ಲರೆ ಬ್ಯಾಂಕಿಂಗ್ ವೈಫಲ್ಯವಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಪತನವು ಪರಿಣಾಮಗಳ ತರಂಗವನ್ನೇ ಸೃಷ್ಟಿಸಿದ್ದು, ಅದರ ತೀವ್ರತೆಯನ್ನು ಇನ್ನಷ್ಟೇ ಮೌಲ್ಯಮಾಪನ ಮಾಡಬೇಕಿದೆ.
ಆದರೆ, ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಅನಿರೀಕ್ಷಿತ ಪತನದ ಪರಿಣಾಮ ಉಂಟಾಗಿರುವುದು ಅದರಿಂದ ಸುಮಾರು 13,000 ಕಿಮೀ ದೂರವಿರುವ ಮುಂಬೈನ ಸಹಕಾರ ಬ್ಯಾಂಕ್‌ನ ಮೇಲೆ ಎಂದು ndtv.com ವರದಿ ಮಾಡಿದೆ.
ನವೋದ್ಯಮಗಳಿಗೆ ಸಾಲ ಒದಗಿಸುವ ಪ್ರಮುಖ ಹಣಕಾಸು ಸಂಸ್ಥೆಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಿಂದ ಅಂತರ ಕಾಯ್ದುಕೊಂಡಿರುವ ಮುಂಬೈನ SVC ಸಹಕಾರ ಬ್ಯಾಂಕ್, ಈ ಕುರಿತು ಸ್ಪಷ್ಟೀಕರಣದ ಟ್ವೀಟ್ ಮಾಡಿದ್ದು, "ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್(SVB)ಗೂ, SVC ಬ್ಯಾಂಕ್‌ಗೂ ಸಂಪೂರ್ಣವಾಗಿ ಯಾವುದೇ ಸಂಬಂಧವಿಲ್ಲ. ಬ್ರ್ಯಾಂಡ್ ಹೆಸರುಗಳ ಸಾಮ್ಯತೆಯನ್ನು ಆಧರಿಸಿ ಆಧಾರರಹಿತ ವದಂತಿ ಹಾಗೂ ಕಿಡಿಗೇಡಿ ಸುದ್ದಿಗಳನ್ನು ಹರಡುತ್ತಿರುವ ದುಷ್ಕರ್ಮಿಗಳ ಮಾತಿಗೆ ಬ್ಯಾಂಕ್‌ನ ಸದಸ್ಯರು, ಗ್ರಾಹಕರು ಹಾಗೂ ಇತರ ಹೂಡಿಕೆದಾರರು ಯಾವುದೇ ಗಮನ ನೀಡಬಾರದು" ಎಂದು ಮನವಿ ಮಾಡಿದೆ.
ಬ್ಯಾಂಕ್‌ನ ವ್ಯಕ್ತಿತ್ವಹರಣಕ್ಕೆ ಯತ್ನಿಸುತ್ತಿರುವ ವದಂತಿಕೋರರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿ ಟ್ವೀಟ್ ಮಾಡಲಾಗಿದೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ZyppElectric ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ಗುಪ್ತ, "ವಿಷಯದ ಕುರಿತು ಸ್ಪಷ್ಟೀಕರಣ ನೀಡಬೇಕಾದ ಮುಂದಿನ ಸದರಿ ಸಂಜಯ್ ಲೀಲಾ ಬನ್ಸಾಲಿ (SLB) ಅವರದ್ದಾಗಬಹುದು. ಭಾರತ ನಿಜಕ್ಕೂ ವಿಸ್ಮಯಕಾರಿ" ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ಭಾರತೀಯರು ಹಾಗೂ ವಾಟ್ಸ್ ಆಯಪ್ ವಿಶ್ವವಿದ್ಯಾಲಯದ ಸದ್ಯದ ಪರಿಸ್ಥಿತಿಯಿದು. SVC ಬ್ಯಾಂಕ್ ಈ ಪ್ರಮುಖ ಸ್ಪಷ್ಟೀಕರಣ ನೀಡಿರುವುದು ನಿಜಕ್ಕೂ ಅದ್ಭುತ. ನಿಮಗೆ ಧನ್ಯವಾದಗಳು" ಎಂದು ವ್ಯಂಗ್ಯವಾಡಿದ್ದಾರೆ.
ಅಂದಹಾಗೆ, 1906ರಲ್ಲಿ ಸ್ಥಾಪನೆಯಾದ SVC ಬ್ಯಾಂಕ್‌ಗೂ ಶುಕ್ರವಾರ ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರಿಂದ ಸ್ಥಗಿತಗೊಂಡ ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ.