ನವದೆಹಲಿ: ಫಿನ್ಲೆಂಡ್ ವಿಶ್ವದ ಅತ್ಯಂತ ಸಂತುಷ್ಟ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಬಿಡುಗಡೆಯಾಗಿರುವ ವಾರ್ಷಿಕ 'ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್' (World Happiness Report) ವರದಿಯ ಪ್ರಕಾರ ಸತತ ಆರನೇ ವರ್ಷ ಫಿನ್ಲೆಂಡ್ ಈ ಕಿರೀಟ ಉಳಿಸಿಕೊಂಡಿದೆ.
ಜಿಡಿಪಿ, ತಲಾದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ನಿರೀಕ್ಷಿತ ಜೀವಿತಾವಧಿ, ಸ್ವಾತಂತ್ರ್ಯ, ಉದಾರತೆ ಮತ್ತು ಕಡಿಮೆ ಲಂಚದ ಮಾನದಂಡದಲ್ಲಿ ಈ ವರದಿ ಸಿದ್ಧಪಡಿಸಲಾಗುತ್ತದೆ.
ಅಂತರರಾಷ್ಟ್ರೀಯ ಸಂತಸ ದಿನ (ಮಾರ್ಚ್ 20)ದಂದು ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರದಿಯ ಪ್ರಕಾರ ವಿವಿಧ ಮಾನದಂಡಗಳ ಅನ್ವಯ ಭಾರತ 125ನೇ ರ್ಯಾಂಕಿಂಗ್ ಗಳಿಸಿದೆ.
150ಕ್ಕೂ ಹೆಚ್ಚು ದೇಶಗಳ ಜನರಿಂದ ಮಾಹಿತಿ ಪಡೆಯಲು ಸಮೀಕ್ಷೆ ನಡೆಸಿ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ ಈ ವರದಿಯನ್ನು ಸಿದ್ಧಪಡಿಸುತ್ತದೆ. ಡೆನ್ಮಾರ್ಕ್ ಅತ್ಯಂತ ಖುಷಿಯ ದೇಶಗಳ ಪೈಕಿ 2ನೇ ಸ್ಥಾನದಲ್ಲಿದ್ದರೆ ಐಸ್‌ಲೆಂಡ್ 3ನೇ ಸ್ಥಾನದಲ್ಲಿದೆ.
"ಉನ್ನತ ಮ್ಟಟದ ವೈಯಕ್ತಿಕ ಮತ್ತು ಸಾಂಸ್ಥಿಕ ವಿಶ್ವಾಸದ ಹಿನ್ನೆಲೆಯಲ್ಲಿ ಸ್ಕ್ಯಾಂಡಿನೇವಿಯನ್ ದೇಶಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಪಶ್ಚಿಮ ಯೂರೋಪ್‌ನಲ್ಲಿ ಸಂಭವಿಸಿದ ಕೋವಿಡ್-19 ಸಾವಿಗೆ ಹೋಲಿಸಿದರೆ ಈ ದೇಶಗಳಲ್ಲಿ ಸಾವಿನ ಪ್ರಮಾಣ ಮೂರನೇ ಒಂದರಷ್ಟು ಮಾತ್ರ. ಒಂದು ಲಕ್ಷ ಮಂದಿಯ ಪೈಕಿ 27 ಮಂದಿ ಮಾತ್ರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಪಶ್ಚಿಮ ಯೂರೋಪ್‌ನಲ್ಲಿ ಈ ಪ್ರಮಾಣ ಒಂದು ಲಕ್ಷಕ್ಕೆ 80" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕಷ್ಟದ ಸನ್ನಿವೇಶದಲ್ಲಿ ಕೂಡಾ ಧನಾತ್ಮಕ ಭಾವನೆಗಳು, ಋಣಾತ್ಮಕ ಭಾವನೆಗಳಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಳಿದುಕೊಂಡಿವೆ. ಏಕಾಂತದ ಬದಲು ಸಾಮಾಜಿಕ ಬೆಂಬಲದ ಧನಾತ್ಮಕ ಭಾವನೆ ಕೂಡಾ ದುಪ್ಪಟ್ಟು ಇದೆ ಎಂದು ಹೇಳಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತಕ್ಕೆ ವರದಿಯಲ್ಲಿ 126ನೇ ಸ್ಥಾನ. ನೇಪಾಳ, ಚೀನಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಿಂತಲೂ ಭಾರತ ಹಿಂದಿದೆ. ಯುದ್ಧದ ಕಾರಣದಿಂದ ರಷ್ಯಾ 72ನೇ ಸ್ಥಾನಕ್ಕೆ ಕುಸಿದಿದ್ದರೆ, ಉಕ್ರೇನ್ 92ನೇ ಸ್ಥಾನದಲ್ಲಿದೆ.