ಕಾಸರಗೋಡು: ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ಅವರು ಜಿಲ್ಲೆಯ ಎಲ್ಲಾ ಗ್ರಾಮ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ತಿಂಗಳುಗಳ ಹಿಂದೆ ಆರಂಭಿಸಿದ ಗ್ರಾಮಾಧಿಕಾರಿ ಕಚೇರಿ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ್ದಾರೆ.
ಜಿಲ್ಲೆಯ ನನಾ ಗ್ರಾಮಾಧಿಕಾರಿ ಕಚೇರಿಗಳಿಗೆ ಭೇಟಿಯ ನಂತರ ಮಂಜೇಶ್ವರಂ ತಾಲೂಕಿನ ಹೊಸಬೆಟ್ಟು ಮತ್ತು ಕಡಂಬಾರ್ ಗ್ರಾಮಗಳಿಗೆ ತಮ್ಮ ಅಭಿಯಾನದ ಅಂತಿಮ ಭೇಟಿ ಆಯೋಜಿಸಿದ್ದರು.
ಕೆಳಹಂತದ ಜನ ಸಾಮಾನ್ಯರು, ಗ್ರಾಮವಾಸಿಗಳು ಹಾಗೂ ಅಧಿಕಾರಿಗಳಿಗೆ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಅರಿತು ಪರಿಹರಿಸುವುದು ಭೇಟಿಯ ಉದ್ದೇಶವಾಗಿದೆ. ಹೆಚ್ಚುವರಿ ಭೂಮಿ ಸಮಸ್ಯೆ, ಹಕ್ಕುಪತ್ರ ಸಮಸ್ಯೆ, ಪರಿಶಿಷ್ಟ ಪಂಗಡ ಪ್ರದೇಶ ಮತ್ತು ಪರಿಶಿಷ್ಟ ಜಾತಿ ಪ್ರದೇಶದ ಸಮಸ್ಯೆಗಳು ಈ ಸಂದರ್ಭ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಕಂದಾಯ ಅಧಿಕಾರಿಗಳ ವಿಶೇಷ ತಂಡವನ್ನು ನೇಮಿಸಲಾಗಿದೆ. ದಶಕಗಳಿಂದ ಬಗೆಹರಿಯದ ಸಮಸ್ಯೆಗಳು ಇದರಲ್ಲಿ ಒಳಗೊಂಡಿದೆ. ವಿಕಲಚೇತನರಿಗೆ ನೆರವು ನೀಡುವುದು ಸೇರಿದಂತೆ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಐವರು ಗ್ರಾಮಾಧಿಕಾರಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ಸಭೆ ನಡೆಸಲಾಗುತ್ತಿದೆ. 20 ಕಡು ಬಡ ಕುಟುಂಬಗಳ ಮನೆಗಳಿಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆಗೆ ಪರಿಹಾರ:
ಜಿಲ್ಲೆಯಲ್ಲಿ 12 ನದಿಗಳಿದ್ದರೂ ಜಿಲ್ಲೆಯ ಭೂವಿನ್ಯಾಸದಿಂದ ಭೀಕರ ಬರಗಾಲ ಎದುರಿಸುವಂತಾಗಿದೆ. ಜಿಲ್ಲೆಯ ಬಹುತೇಕ ಪ್ರದೇಶ ಲ್ಯಾಟರೈಟ್ ಬಂಡೆಗಳಿಂದ ಕೂಡಿದ್ದು, ಇದು ಕಡಿಮೆ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಇದರಿಂದ ಕೃಷಿ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ಹಾಸುಪಾರೆ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳು ಆರಂಭಿಸಬೇಕಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆಯನ್ನು ಪರಿಹರಿಸಲು ಕಾಸರಗೋಡು ಜಿಲ್ಲೆಯ ಜನರು ಸರ್ಕಾರಿ ಉದ್ಯೋಗದಲ್ಲಿ ಸೇರ್ಪಡೆಗೊಳ್ಳುವಂತಾಗಬೇಕು. ಆರ್ಥಿಕ ಸಾಕ್ಷರತೆಯ ಕೊರತೆಯಿಂದ ಹೆಚ್ಚು ಸಾಲ ಪಡೆದು ಆಸ್ತಿಮುಟ್ಟುಗೋಲು ಹಾಕಿಕೊಳ್ಳುವ ದುಸ್ಥಿತಿ ಪ್ರತಿ ಹಳ್ಳಿಯಲ್ಲಿದೆ. ಜಿಲ್ಲೆಯಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ತಿಳಿಸಿದ್ದಾರೆ.