ಔರಂಗಾಬಾದ್(PTI): ಮಹಾರಾಷ್ಟ್ರದ ಔರಂಗಾಬಾದ್ ನ ರಾಮ ಮಂದಿರದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆಯಾದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ ಪೊಲೀಸರ ಮೇಲೆ ಸುಮಾರು 500 ಜನರ ಗುಂಪೊಂದು ಕಲ್ಲು ಮತ್ತು ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಎಸೆದರಿಂದ 10 ಪೊಲೀಸರು ಸೇರಿದಂತೆ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಗರದ ಪ್ರಸಿದ್ಧ ರಾಮಮಂದಿರವಿರುವ ಕಿರಾದ್‌ಪುರ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿಯಲ್ಲಿ ದುಷ್ಕರ್ಮಿಗಳು 13 ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಬಳಸಿದ್ದು, ಕೆಲವು ಪ್ಲಾಸ್ಟಿಕ್ ಗುಂಡುಗಳನ್ನು ಹಾರಿಸಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಿ, ಬಂಧಿಸಲು ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು,
ಔರಂಗಾಬಾದ್‌ನಾದ್ಯಂತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಮ ಮಂದಿರದ ಬಳಿ
ಸುಮಾರು ಐದು ಜನರನ್ನು ಒಳಗೊಂಡ ಎರಡು ಗುಂಪುಗಳು ಘರ್ಷಣೆಯಾದ ನಂತರ ಇದು
ಪ್ರಾರಂಭವಾಯಿತು. ಈ ಘಟನೆ ಸಂಬಂಧ 400 ರಿಂದ 500 ಮಂದಿ ವಿರುದ್ಧ ಜಿನ್ಸಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಶಿಲ್ ವಂತ್ ನಂದೇಡ್ಕರ್ ತಿಳಿಸಿದ್ದಾರೆ.