ನವದೆಹಲಿ(PTI): ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಈ ವಾರ ಸಂಸತ್ತಿನಲ್ಲಿ ಮಂಡಿಸಿರುವ ವರದಿಯಂತೆ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರ (ಎನ್‌ಐಸಿ)ದಲ್ಲಿ ಸುಮಾರು 1,400 ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವವು 2014ರಿಂದಲೂ ಅನುಮತಿಗಾಗಿ ಕಾಯುತ್ತಿದೆ.
ಪ್ರಸ್ತಾವವು ಅನುಮತಿಸಲ್ಪಟ್ಟರೆ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಘಟಕವನ್ನು ದೀರ್ಘಕಾಲದಿಂದಲೂ ಕಾಡುತ್ತಿರುವ ಸಂಪನ್ಮೂಲಗಳು ಮತ್ತು ಮಾನವ ಶಕ್ತಿ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಲಿದೆ.
ಸ್ಥಾಯಿ ಸಮಿತಿಯ ವರದಿಯಂತೆ ರಾಜ್ಯಗಳಲ್ಲಿ ಹೊಸದಾಗಿ ಆರಂಭಿಸಲಾಗಿರುವ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಾಹಿತಿ ಅಧಿಕಾರಿಗಳು (ಡಿಐಒ) ಮತ್ತು ಹೆಚ್ಚುವರಿ ಡಿಐಒಗಳ ಮಟ್ಟದ ತಾಂತ್ರಿಕ ಮಾನವ ಶಕ್ತಿಯ ನಿಯೋಜನೆಯ ಅಗತ್ಯವನ್ನು ಪೂರೈಸಲು 212 ಹೊಸ ಹುದ್ದೆಗಳ ಸೃಷ್ಟಿಗಾಗಿ ಪ್ರತ್ಯೇಕ ಪ್ರಸ್ತಾವವನ್ನು ಎನ್‌ಐಸಿ 2022ರಲ್ಲಿ ಸಲ್ಲಿಸಿದೆ. ಪ್ರಸ್ತಾವಕ್ಕೆ ಅನುಮೋದನೆ ಇನ್ನೂ ಸಿಗಬೇಕಿದೆ.
ಎನ್‌ಐಸಿಯಲ್ಲಿ ಸಂಪನ್ಮೂಲಗಳು ಮತ್ತು ಮಾನವಶಕ್ತಿ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಂಸದೀಯ ಸಮಿತಿಯ ಪ್ರಶ್ನೆಗೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉತ್ತರವನ್ನು ಉಲ್ಲೇಖಿಸಿರುವ ವರದಿಯು,1,407(ನಂತರ 1,392ಕ್ಕೆ ಪರಿಷ್ಕರಿಸಲಾಗಿದೆ) ಹೊಸ ಹುದ್ದೆಗಳ ಸೃಷ್ಟಿಗಾಗಿ ಸಲ್ಲಿಸಲಾಗಿರುವ ಪ್ರಸ್ತಾವವು 2014ರಿಂದ ಅನುಮತಿಗಾಗಿ ಬಾಕಿಯಿದೆ ಎಂದು ತಿಳಿಸಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಒತ್ತು ನೀಡುವಲ್ಲಿ ಮತ್ತು ನಾಗರಿಕರಿಗೆ ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವಲ್ಲಿ ಎನ್‌ಐಸಿಯ ಪ್ರಮುಖ ಪಾತ್ರವನ್ನು ಪರಿಗಣಿಸಿದರೆ ಮಾನವಶಕ್ತಿ ಕೊರತೆಯು ಅತ್ಯಂತ ಮುಖ್ಯ ಸಮಸ್ಯೆಯಾಗಿದೆ.
1,392 ಹುದ್ದೆಗಳ ಪ್ರಸ್ತುತ ಸ್ಥಿತಿಗತಿ ಕುರಿತಂತೆ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಎಲ್ಲ ಹಂತಗಳಲ್ಲಿ ಸೂಕ್ತ ಚರ್ಚೆಗಳ ಬಳಿಕ ಪ್ರಸ್ತಾವಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಮತ್ತು ಅದನ್ನು ವಿತ್ತ ಸಚಿವಾಲಯದ ಒಪ್ಪಿಗೆಗಾಗಿ ಸಲ್ಲಿಸಲಾಗಿದೆ ಎಂದು ಸಚಿವಾಲಯದ ಉತ್ತರವನ್ನು ಉಲ್ಲೇಖಿಸಿ ವರದಿಯು ಹೇಳಿದೆ.
ಕೆಲವು ಅಂಶಗಳ ಕುರಿತು ಸ್ಪಷ್ಟನೆಯನ್ನು ಕೋರಿ ವಿತ್ತ ಸಚಿವಾಲಯವು ಪ್ರಸ್ತಾವವನ್ನು ವಾಪಸ್ ಕಳುಹಿಸಿತ್ತು ಮತ್ತು ಅವುಗಳನ್ನು ಆಂತರಿಕ ಸಮಿತಿಯು ಪರಿಶೀಲಿಸಿದೆ. ಫೆಬ್ರವರಿ 2020ರಲ್ಲಿ ಪ್ರಸ್ತಾವವನ್ನು ವಿವರವಾದ ಸ್ಪಷ್ಟನೆಗಳೊಂದಿಗೆ ವಿತ್ತ ಸಚಿವಾಲಯಕ್ಕೆ ಪುನಃ ಸಲ್ಲಿಸಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
2022-23ರಲ್ಲಿ ಎನ್‌ಐಸಿಯು ನೇಮಕಾತಿ ಏಜೆನ್ಸಿ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮೂಲಕ ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕರ ಮಟ್ಟದ 754 ಹುದ್ದೆಗಳಿಗೆ ಭರ್ತಿ ಅಭಿಯಾನವನ್ನೂ ಆರಂಭಿಸಿದೆ. ವಯೋನಿವೃತ್ತಿ,ಸ್ವಯಂ ನಿವೃತ್ತಿ,ರಾಜೀನಾಮೆಗಳು ಮತ್ತು ಸಾವುಗಳಿಂದಾಗಿ ಈ ಹುದ್ದೆಗಳು ಖಾಲಿಯಿವೆ. ಇವುಗಳಲ್ಲಿ ಡಿಸೆಂಬರ್ 2023ರವರೆಗೆ ನಿರೀಕ್ಷಿತ ಖಾಲಿ ಹುದ್ದೆಗಳೂ ಸೇರಿವೆ ಎಂದು ಸಚಿವಾಲಯವು ಸ್ಥಾಯಿ ಸಮಿತಿಗೆ ತಿಳಿಸಿದೆ.