ಕೊಚ್ಚಿ: ಕ್ಯಾನ್ಸರ್ ಇದೆ ಅಂತ ನಾಟಕವಾಡಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಜು ಎಂದು ಗುರುತಿಸಲಾಗಿದೆ.
ತಾನು ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಹಳೆಯ ವಿದ್ಯಾರ್ಥಿಗಳ ವಾಟ್ಸ್ಆಯಪ್ ಗ್ರೂಪ್ನಲ್ಲಿ ಬಿಜು ಮೆಸೇಜ್ ಮಾಡಿದ್ದ. ಬಳಿಕ ಧ್ವನಿ ಬದಲಾಯಿಸಿಕೊಂಡು ತಾನು ಬಿಜು ಅವರ ಅಂಕಲ್ ಎಂದು ಪರಿಚಯ ಮಾಡಿಕೊಂಡಿದ್ದ. ಧ್ವನಿ ಬದಲಾಯಿಸಲು ಮೊಬೈಲ್ ಅಪ್ಲಿಕೇಶನ್ ಬಳಸಿದ್ದ. ಮಾತು ನಂಬಿದ ಕ್ಲಾಸ್ಮೇಟ್ಸ್ ಸುಮಾರು 10.5 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದರು.
ಇದಾದ ಬಳಿಕ ಹೆಣ್ಣಿನ ಧ್ವನಿಯಲ್ಲಿ ಶಿಕ್ಷಕರಿಗೆ ಕರೆ ಮಾಡಿ, ತಾನು ಬಿಜು ಅವರ ಸಹೋದರಿ ಎಂದು ಹೇಳಿಕೊಂಡು ನೆರವು ಕೋರಿದ್ದ. ಶಿಕ್ಷಕರು ಸಹ ಮಾತು ನಂಬಿ ಹಣ ನೀಡಿದ್ದರು. ಒಟ್ಟು 15 ಲಕ್ಷ ರೂಪಾಯಿಯನ್ನು ಬಿಜು ವಸೂಲಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಸಹ ಪೋರ್ಜರಿ ಮಾಡಿರುವ ಬಿಜು ಅದನ್ನು ವಾಟ್ಸ್ಆಯಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದ. ಬಳಿಕ ಚಿಕಿತ್ಸೆಗೆ ಹಣ ನೀಡುವಂತೆ ಕೇಳಿದ್ದ. ಇದಾದ ಬಳಿಕ ವಿಡಿಯೋ ಕಾಲ್ ಮಾಡುದಂತೆ ಕ್ಲಾಸ್ಮೇಟ್ಗಳು ಅಂಕಲ್ಗೆ ಕೇಳಿದ್ದರು. ಅದೇ ದಿನ ರಾತ್ರಿ ವಿಡಿಯೋ ಕಾಲ್ ಮಾಡಿದ ಬಿಜು ಮುಖವನ್ನು ಮುಚ್ಚಿಕೊಂಡು ಮಾತನಾಡಿದ್ದ. ಇದು ಕ್ಲಾಸ್ಮೇಟ್ಗಳ ಅನುಮಾನಕ್ಕೆ ಕಾರಣವಾಯಿತು. ನಂತರ ಅಂಕಲ್ ನಂಬರ್‌ಗೆ ಕರೆ ಮಾಡಿದಾಗ ಬಿಜು ಮೃತಪಟ್ಟಿದ್ದಾನೆ ಎಂಬ ಉತ್ತರ ಬಂದಿತು.
ಈ ಮಧ್ಯೆ ಕ್ಲಾಸ್ಮೇಟ್ ಒಬ್ಬರು ಬಿಜು ಅವರನ್ನು ತೊಡುಪುಳದಲ್ಲಿ ಭೇಟಿಯಾದರು. ಬಿಜು ಹೊಸ ಕಾರೊಂದನ್ನು ಖರೀದಿಸಿರುವುದು ಆತನಿಗೆ ಗೊತ್ತಾಗಿ, ತಾವು ವಂಚನೆಗೆ ಒಳಗಾಗಿರುವುದು ಅರಿವಾಯಿತು. ಇದಾದ ಬಳಿಕ ಕ್ಲಾಸ್ಮೇಟ್ ಎಲ್ಲರೂ ಸೇರಿ ಸಹಿ ಮಾಡಿ ತೊಡುಪುಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿವೈಎಸ್ಪಿ ಎಂ.ಆರ್.ಮಧುಬಾಬು ನೇತೃತ್ವದ ತಂಡ ಬಿಜುನನ್ನು ಬಂಧಿಸಿದೆ.
ಚೆರ್ತಾಲ ಮೂಲದ ಬಿಜು, ಮದುವೆಯ ನಂತರ ಮುಳಪ್ಪುರಂಗೆ ಬಂದಿದ್ದರು. ಆತ ಎರಡು ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದು, ಒಂದು ಮುಲಪ್ಪುರಂ ವಿಳಾಸ ಮತ್ತು ಇನ್ನೊಂದು ಆಲಪ್ಪುಳ ವಿಳಾಸದಲ್ಲಿದೆ. ಅಲಪ್ಪುಳದ ಆಧಾರ್ ಕಾರ್ಡ್‌ನಲ್ಲಿ ಬಿಜು ಚೆಲ್ಲಪ್ಪನ್ ಎಂಬ ಹೆಸರಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ಘಟನೆ ಯಾರನ್ನು ನಂಬುದು ಯಾರನ್ನು ಬಿಡುವುದು ಎಂಬ ಮಾತಿಗೆ ಕನ್ನಡಿಯಂತಿದೆ.