ಇಟಾನಗರ: ಈಸ್ಟರ್ನ್ ನಾಗಾ ನ್ಯಾಷನಲ್ ಗವರ್ನಮೆಂಟ್(ಇಎನ್‌ಎನ್‌ಜಿ) ಸಂಘಟನೆಯ ಮುಖ್ಯಸ್ಥ ತೋಷಮ್ ಮೊಸಾಂಗ್ ಸೇರಿದಂತೆ 15 ಮಂದಿ ಬಂಡುಕೋರರು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರ ಸಮ್ಮುಖದಲ್ಲಿ ಭಾನುವಾರ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಂಡುಕೋರರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ ಎಂದೂ ಹೇಳಿದ್ದಾರೆ.
ಎರಡು ಎ.ಕೆ-47 ರೈಫಲ್‌ಗಳು, ಚೀನಾ ನಿರ್ಮಿತ ಬಂದೂಕು ಹಾಗೂ ಪಿಸ್ತೂಲುಗಳು, ಗ್ರೆನೇಡ್, ಮದ್ದುಗುಂಡುಗಳನ್ನು ಬಂಡುಕೋರರು ಈ ಸಂದರ್ಭದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವಿಶೇಷ ತನಿಖಾ ತಂಡದ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬಿರ್ ಸಿಂಗ್ ವಿವರಿಸಿದ್ದಾರೆ.
ಇದೊಂದು ಐತಿಹಾಸಿಕ ಸಮಾರಂಭ ಎಂದಿರುವ ಪೆಮಾ ಖಂಡು, 'ಬಂದೂಕು ಸಂಸ್ಕೃತಿಯು ಸಮಸ್ಯೆಗಳಿಗೆ ಪರಿಹಾರವಲ್ಲ. ರಾಜ್ಯದಲ್ಲಿ ಶಾಂತಿ ಪುನಸ್ಥಾಪಿಸುವ ನಿಟ್ಟಿನಲ್ಲಿ ಇದು ಧನಾತ್ಮಕ ನಡೆಯಾಗಿದೆ' ಎಂದಿದ್ದಾರೆ.
'ಶರಣಾಗತರಾಗಿರುವ ಬಂಡುಕೋರರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರವು ನೆರವು ನೀಡಲಿದೆ' ಎಂದೂ ಭರವಸೆ ನೀಡಿದ್ದಾರೆ.
'ಈ ಸಂಘಟನೆಯ ಬಂಡುಕೋರರು ಉದ್ಯಮಿಗಳು, ಗುತ್ತಿಗೆದಾರರು, ವ್ಯಾಪಾರಿಗಳನ್ನು ಸುಲಿಗೆ ಮಾಡಿರುವ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ' ಎಂದು ರೋಹಿತ್ ರಾಜ್‌ಬಿರ್‌ಸಿಂಗ್ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಚೌನಾ ಮೇ, ರಾಜ್ಯ ಗೃಹಸಚಿವ ಬಮಾಂಗ್ ಫೆಲಿಕ್ಸ್, ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.