ನವದೆಹಲಿ:ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್ಮಾರ್ಕ್ ಮಾಡಲಾದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಮುಂದಿನ ತಿಂಗಳಿನಿಂದ ನಿಷೇಧಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಿರು ಮಾರಾಟ ಘಟಕಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
2023,ಎ.1ರಿಂದ ಆರು ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯೊಂದಿಗೆ ಹಾಲ್ಮಾರ್ಕ್ (ಎಚ್ಯುಐಡಿ) ಮಾಡಲಾದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟಕ್ಕೆ ಮಾತ್ರ ಅನುಮತಿಯನ್ನು ನೀಡಲಾಗುವುದು ಎಂದು ಹೇಳಿಕೆಯು ತಿಳಿಸಿದೆ.
2023,ಮಾ.3ರಂದು ಕೇಂದ್ರ ಸಚಿವ ಪಿಯೂಷ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್)ನ ಪರಿಶೀಲನಾ ಸಭೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕಿರು ಮಾರಾಟ ಘಟಕಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಯತ್ನವಾಗಿ ಬಿಐಎಸ್ ತನ್ನ ವಿವಿಧ ಉತ್ಪನ್ನ ಪ್ರಮಾಣೀಕರಣ ಯೋಜನೆಗಳಲ್ಲಿ ಪ್ರಮಾಣೀಕರಣ/ಕನಿಷ್ಠ ಮಾರ್ಕಿಂಗ್ ಶುಲ್ಕಗಳಲ್ಲಿ ಶೇ.80ರಷ್ಟು ರಿಯಾಯಿತಿಯನ್ನು ಒದಗಿಸಲಿದೆ. ಹೆಚ್ಚುವರಿಯಾಗಿ ಈಶಾನ್ಯ ಭಾರತದಲ್ಲಿಯ ಮಾರಾಟ ಘಟಕಗಳಿಗೆ ಶೇ.10ರಷ್ಟು ಅತಿರಿಕ್ತ ರಿಯಾಯಿತಿಯು ಮುಂದುವರಿಯಲಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಿಂದ ಮಾ.31ರ ಬಳಿಕ ಎಚ್ಯುಐಡಿ ಇಲ್ಲದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟಕ್ಕೆ ಅನುಮತಿಸದಿರಲು ನಿರ್ಧರಿಸಲಾಗಿದೆ ಎದು ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.