ನವದೆಹಲಿ :ಎಟಿಎಂಗಳಿಗೆ ರೂ. 2,000 ಮುಖಬೆಲೆಯ ನೋಟುಗಳನ್ನು ಲೋಡ್ ಮಾಡಬೇಕೇ ಅಥವಾ ಬೇಡವೇ ಎಂಬ ಕುರಿತು ಬ್ಯಾಂಕುಗಳಿಗೆ ಯಾವುದೇ ಸೂಚನೆ ನೀಡಲಾಗಿಲ್ಲ, ಬ್ಯಾಂಕ್‌ಗಳು ಈ ಕುರಿತು ಗ್ರಾಹಕರ ಅಗತ್ಯತೆಗಳು, ಹಿಂದಿನ ಬಳಕೆ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಮ್ಮದೇ ನಿರ್ಧಾರ ಕೈಗೊಳ್ಳುತ್ತವೆ ಎಂದು ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿಗಳ ಪ್ರಕಾರ ದೇಶದಲ್ಲಿ ಮಾರ್ಚ್ 2017ರ ಅಂತ್ಯಕ್ಕೆ ಹಾಗೂ 2022 ರ ಮಾರ್ಚ್ ಅಂತ್ಯಕ್ಕೆ ಚಲಾವಣೆಯಲ್ಲಿದ್ದ ರೂ. 500 ಹಾಗೂ ರೂ. 2000 ಮುಖಬೆಲೆಯ ನೋಟುಗಳ ಮೌಲ್ಯ ಕ್ರಮವಾಗಿ ರೂ. 9.512 ಲಕ್ಷ ಕೋಟಿ ಹಾಗೂ ರೂ. 27.057 ಲಕ್ಷ ಕೋಟಿ ಆಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವೆ, ಕೇಂದ್ರ ಸರ್ಕಾರದ ಒಟ್ಟು ಸಾಲ/ಬಾಧ್ಯತೆಗಳು ಅಂದಾಜು ಮಾರ್ಚ್ 31, 2023 ರಲ್ಲಿದ್ದಂತೆ ರೂ. 155.8 ಲಕ್ಷ ಕೋಟಿ (ಜಿಡಿಪಿಯ ಶೇ 57.3) ಆಗಿದೆ. ಇದರಲ್ಲಿ ಬಾಹ್ಯ ಸಾಲ ಈಗಿನ ವಿನಿಮಯ ದರದಲ್ಲಿ ಅಂದಾಜು ರೂ. 7.03 ಲಕ್ಷ ಕೋಟಿ (ಜಿಡಿಪಿಯ ಶೇ 2.6) ಆಗಿದೆ ಎಂದು ಸಚಿವೆ ತಿಳಿಸಿದ್ದಾರೆ.