ನವದೆಹಲಿ:ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್ಸಿನಲ್ಲಿ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಇವು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂದು thewire.in ವರದಿ ಮಾಡಿದೆ.
ಕ್ಯಾಂಪಸ್ಸಿನಲ್ಲಿ ಧರಣಿಗಳನ್ನು ನಡೆಸಿದ್ದಕ್ಕೆ ವಿದ್ಯಾರ್ಥಿಗಳಿಗೆ ರೂ. 20,000 ವರೆಗೆ ದಂಡ ವಿಧಿಸಬಹುದಾಗಿದೆ. ವಿದ್ಯಾರ್ಥಿಗಳು ಘೇರಾವ್ ನಡೆಸಿದರೆ ಅಥವಾ ಹಿಂಸೆ ನಡೆಸಿದ ಆರೋಪ ಎದುರಿಸಿದರೆ ಅವರಿಗೆ ರೂ 30,000 ತನಕ ದಂಡ ವಿಧಿಸಬಹುದಾಗಿದೆ.
ಈ ಹೊಸ "ಶಿಸ್ತಿನ ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಸೂಕ್ತ ನಡವಳಿಕೆ ನಿಯಮಗಳು" ಸುಮಾರು 10 ಪುಟಗಳಷ್ಟಿದ್ದು ಅದರಲ್ಲಿ ಶಿಕ್ಷೆಯ ವಿವರಗಳು ಹಾಗೂ ಯಾವ ಚಟುವಟಿಕೆಗಳನ್ನು ದುರ್ವರ್ತನೆ ಅಥವಾ ಅಶಿಸ್ತು ಎಂದು ತಿಳಿಯಬಹುದೆಂಬ ಕುರಿತು ಪಟ್ಟಿ ಮಾಡಲಾಗಿದೆ.
ಈ ನಿಯಮಗಳನ್ನು ಫೆಬ್ರವರಿ 3 ರಂದು ಜಾರಿಗೆ ತರಲಾಗಿದೆ ಎಂದು ತಿಳಿಯಲಾಗಿದ್ದು ಈ ಸಂದರ್ಭ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರತಿಭಟನಾರ್ಥವಾಗಿ ಪ್ರದರ್ಶಿಸಲು ಸಂಸ್ಥೆಯ ಆಡಳಿತದ ಆದೇಶವನ್ನು ಧಿಕ್ಕರಿಸಿದ್ದರು.
ನಿಯಮ ಉಲ್ಲಂಘಿಸಿದವರಿಗೆ ವಿಧಿಸಬಹುದಾದ ವಿವಿಧ ಶಿಕ್ಷೆಗಳಲ್ಲಿ ದಾಖಲಾತಿ ರದ್ದತಿ, ಪದವಿ ಹಿಂಪಡೆಯುವಿಕೆ, ನೋಂದಣಿಗೆ ಅನುಮತಿ ನಿರಾಕರಣೆ, ನಾಲ್ಕು ಸೆಮೆಸ್ಟರ್ ತನಕ ವಜಾ, ಕ್ಯಾಂಪಸ್ಸಿನ ಒಂದು ಭಾಗಕ್ಕೆ ಪ್ರವೇಶ ನಿರಾಕರಿಸುವುದು, ರೂ 30,000 ದಂಡ, ಹಾಸ್ಟೆಲಿನಿಂದ ಹೊರಕಳುಹಿಸುವುದು ಮುಂತಾದವು ಸೇರಿವೆ.