ನವದೆಹಲಿ : 2019ರ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸೂರತ್ ನ್ಯಾಯಾಲಯದಿಂದ ಘೋಷಿಸಲ್ಪಟ್ಟ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಆದರೆ ರಾಹುಲ್ ವಿರುದ್ಧ ಇದೊಂದೇ ಮಾನನಷ್ಟ ಪ್ರಕರಣವಲ್ಲ. 2014ರಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಜೇಶ ಕುಂಟೆ ಮಿಶ್ರಾರ ದೂರಿನ ಮೇರೆಗೆ ದಾಖಲಾದ ಇನ್ನೊಂದು ಮಾನನಷ್ಟ ಪ್ರಕರಣದಲ್ಲಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯ ನ್ಯಾಯಾಲಯವೊಂದು ರಾಹುಲ್ಗೆ ಸಮನ್ಸ್ ಜಾರಿಗೊಳಿಸಿತ್ತು.
ಮಹಾತ್ಮಾ ಗಾಂಧಿಯವರ ಹತ್ಯೆಗಾಗಿ ಆರೆಸ್ಸೆಸ್ನ್ನು ದೂಷಿಸಿದ್ದಕ್ಕಾಗಿ 2014ರಲ್ಲಿ ರಾಹುಲ್ ವಿರುದ್ಧ ಐಪಿಸಿಯ ಕಲಂ 499 ಮತ್ತು 500ರಡಿ ಈ ದೂರು ದಾಖಲಾಗಿತ್ತು. 2014ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಭಿವಂಡಿಯಲ್ಲಿ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ರಾಹುಲ್,'ಇದು ಅವರ ಶೈಲಿ. ಅವರು ಗಾಂಧೀಜಿಯನ್ನು ಕೊಂದಿದ್ದರು. ಆರೆಸ್ಸೆಸ್ನ ವ್ಯಕ್ತಿಗಳು ಗಾಂಧೀಜಿಯವರಿಗೆ ಗುಂಡಿಕ್ಕಿದ್ದರು ಮತ್ತು ಈಗ ಅವರ ಜನರು ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ 'ಎಂದು ಹೇಳಿದ್ದಾಗಿ ಕುಂಟೆ ದೂರಿನಲ್ಲಿ ಆರೋಪಿಸಿದ್ದರು.
ಆರೆಸ್ಸೆಸ್ ಮತ್ತು ಅದರ ಸದಸ್ಯರ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡುವುದು ರಾಹುಲ್ ಉದ್ದೇಶವಾಗಿತ್ತು ಎಂದೂ ಅವರು ದೂರಿನಲ್ಲಿ ಹೇಳಿದ್ದರು. ದೂರಿನ ಆಧಾರದಲ್ಲಿ ಭಿವಂಡಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು.
ಬಳಿಕ ರಾಹುಲ್ ಭಿವಂಡಿ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿರುವ ಸಮನ್ಸ್ ಮತ್ತು ಆರಂಭಿಸಿರುವ ಕಾನೂನು ಕ್ರಮಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
2015,ಮಾ.10ರಂದು ಉಚ್ಚ ನ್ಯಾಯಾಲಯವು ರಾಹುಲ್ ವಿರುದ್ಧದ ಸಮನ್ಸ್ ಮತ್ತು ಕಾನೂನು ಕ್ರಮವನ್ನು ರದ್ದುಗೊಳಿಸಲು ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ರಾಹುಲ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. 2016,ಸೆ.1ರಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ರೋಹಿನ್ಟನ್ ನಾರಿಮನ್ ಅವರ ಪೀಠವು ಮುಂಬೈ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಬಳಿಕ ರಾಹುಲ್ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಭಿವಂಡಿ ನ್ಯಾಯಾಲಯದಲ್ಲಿನ ಮಾನನಷ್ಟ ಕಲಾಪಗಳನ್ನು ರದ್ದುಗೊಳಿಸಲು ಕೋರಿದ್ದ ಅರ್ಜಿಯನ್ನು ಹಿಂದೆಗೆದುಕೊಂಡಿದ್ದರು. ಅರ್ಜಿಯು ವಜಾಗೊಂಡಿದೆ ಎಂದು ಪರಿಗಣಿಸಲಾಗಿತ್ತು.
2016,ಮೇ 14ರಂದು ರಾಹುಲ್ ಹೊಸದಾಗಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು. ರಾಹುಲ್ ಐಪಿಸಿಯ ಕಲಂ 499 ಮತ್ತು 500ನ್ನು ಪ್ರಶ್ನಿಸಿದ್ದು,ಇದು ಈ ಅರ್ಜಿಯನ್ನು ಹಿಂದಿನ ಅರ್ಜಿಗಿಂತ ಭಿನ್ನವಾಗಿಸಿತ್ತು. ಆದರೆ 'ಸುಬ್ರಮಣಿಯನ್ ಸ್ವಾಮಿ ವಿರುದ್ಧ ಭಾರತ ಒಕ್ಕೂಟ 'ಪ್ರಕರಣದಲ್ಲಿ 2016ರಲ್ಲಿ ನೀಡಲಾಗಿದ್ದ ತೀರ್ಪನ್ನು ನೆಚ್ಚಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು.
ಏನಿದು ಸುಬ್ರಮಣಿಯನ್ ಸ್ವಾಮಿ ಪ್ರಕರಣ?
'ಸುಬ್ರಮಣಿಯನ್ ಸ್ವಾಮಿ ವಿರುದ್ಧ ಭಾರತ ಒಕ್ಕೂಟ 'ಪ್ರಕರಣದಲ್ಲಿ 2016ರ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಕಲಂ 499 ಮತ್ತು 500ರಡಿ ಕ್ರಿಮಿನಲ್ ಮಾನನಷ್ಟದ ಸಾಂವಿಧಾನಿಕತೆಯನ್ನು ಎತ್ತಿ ಹಿಡಿದಿತ್ತು. ಪ್ರತಿಷ್ಠೆಯ ಹಕ್ಕಿನ ಎದುರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕು ಸಮತೋಲನದಲ್ಲಿರಬೇಕು ಎಂದು ಅದು ಹೇಳಿತ್ತು.