ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಬ್ಲೂ ಮತ್ತು ಗ್ರೇ ಕಾಲರ್ ಉದ್ಯೋಗಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಕೇವಲ ಶೇ.1ರಷ್ಟು ಏರಿಕೆಯಾಗಿದೆ ಎಂದು ಅಧ್ಯಯನವೊಂದು ತೋರಿಸಿದೆ. ರೈತರು ಮತ್ತು ಮೆಕ್ಯಾನಿಕ್‌ಗಳಂತಹ ಮಾನವ ಶ್ರಮವನ್ನು ಬೇಡುವ ಉದ್ಯೋಗಗಳು ಬ್ಲೂ ಕಾಲರ್‌ನಡಿ ಬಂದರೆ, ಸಾಮಾನ್ಯವಾಗಿ ನಿವೃತ್ತರಾದ ಬಳಿಕವೂ ದುಡಿಯುವವರು ಹಾಗೂ ಮಾನವ ಶ್ರಮ ಮತ್ತು ತಾಂತ್ರಿಕ ಕೌಶಲ್ಯಗಳ ಮಿಶ್ರಣವನ್ನು ಬೇಡುವ ಉದ್ಯೋಗಗಳನ್ನು ಗ್ರೇ ಕಾಲರ್ ಎಂದು ಪರಿಗಣಿಸಲಾಗುತ್ತದೆ.
ಇಕನಾಮಿಕ್ ಟೈಮ್ಸ್‌ಗಾಗಿ ಬೆಟರ್‌ಪ್ಲೇಸ್ ನಡೆಸಿರುವ ಈ ಅಧ್ಯಯನವು 2017ರ ಶೇ.11.96ಕ್ಕೆ ಹೋಲಿಸಿದರೆ ಡಿಸೆಂಬರ್ 2022ರ ವೇಳೆಗೆ ಬ್ಲೂ ಮತ್ತು ಗ್ರೇ ಕಾಲರ್ ಉದ್ಯೋಗಗಳಲ್ಲಿ ಮಹಿಳೆಯರ ಉಪಸ್ಥಿತಿ ಕೇವಲ ಶೇ.13.2ರಷ್ಟಿತ್ತು ಎನ್ನುವುದನ್ನು ತೋರಿಸಿದೆ ಎಂದು thewire.in ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ವರ್ಗಗಳ ಉದ್ಯೋಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಕುಸಿದಿದ್ದು, 2020ರಲ್ಲಿ ಶೇ.6.34ಕ್ಕೆ ಇಳಿಕೆಯಾಗಿತ್ತು. ಇದು ಸಾಂಕ್ರಾಮಿಕದ ಅವಧಿಯಲ್ಲಿ ಉದ್ಯೋಗ ನಷ್ಟವು ವಿಶೇಷವಾಗಿ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿತ್ತು ಎಂಬ ಅಂಶವನ್ನು ಒತ್ತಿ ಹೇಳಿದೆ ಎಂದಿರುವ ವರದಿಯು, ಕೌಟುಂಬಿಕ ಹೊಣೆಗಾರಿಕೆಗಳಿಂದಾಗಿ ಉದ್ಯೋಗಗಳನ್ನು ತೊರೆದವರಲ್ಲಿ ಮಹಿಳೆಯರು ಮೊದಲಿಗರಾಗಿದ್ದರು ಎಂದು ಬೆಟ್ಟು ಮಾಡಿದೆ.
ಕಳೆದ ಹಲವಾರು ವರ್ಷಗಳಿಂದ ದುಡಿಯುವ ವರ್ಗದಲ್ಲಿ ಭಾರತೀಯ ಮಹಿಳೆಯರ ಪಾಲ್ಗೊಳ್ಳುವಿಕೆಯು ಶೇ.11 ಮತ್ತು ಶೇ.13ರ ನಡುವೆ ಓಲಾಡುತ್ತಿದೆ.
ಕೈಗಾರಿಕೆಗಳು ಮತ್ತು ಸಾರ್ವತ್ರಿಕವಾಗಿ ಸಮಾಜದ ಮೇಲಿನ ಕೋವಿಡ್ ಪರಿಣಾಮಗಳು ಕಡಿಮೆಯಾದಾಗಿನಿಂದ ಹೆಚ್ಚೆಚ್ಚು ಮಹಿಳೆಯರು ಬ್ಲೂ ಮತ್ತು ಗ್ರೇ ಕಾಲರ್ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಚೇತರಿಕೆ ಸ್ಥಿತಿಯನ್ನು ಅಧ್ಯಯನವು ತೋರಿಸಿದೆಯಾದರೂ ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಕೇವಲ ಶೇ.1ರಷ್ಟು ಏರಿಕೆಯಾಗಿದೆ.
ದುಡಿಯುವ ವರ್ಗದಲ್ಲಿ ಮಹಿಳೆಯರ ಕಡಿಮೆ ಪಾಲ್ಗೊಳ್ಳುವಿಕೆಗೆ ಸಾಮಾಜಿಕ ಅಡೆತಡೆಗಳು ಮಾತ್ರವಲ್ಲ, ಬದಲಾವಣೆಯನ್ನು ತರಲು ಸರಕಾರ ಮತ್ತು ಉದ್ಯಮಗಳಿಂದ ಸಾಕಷ್ಟು ಕ್ರಮಗಳ ಕೊರತೆಯೂ ಕಾರಣವಾಗಿದೆ ಎಂದು ಅಧ್ಯಯನ ವರದಿಯು ಎತ್ತಿ ತೋರಿಸಿದೆ.
ಮಹಿಳೆಯರ ಕಡಿಮೆ ಪಾಲ್ಗೊಳ್ಳುವಿಕೆಯು ಪೂರೈಕೆ ಮತ್ತು ಬೇಡಿಕೆ ಹೀಗೆ ಎರಡೂ ಕಡೆಗಳಿಂದ ನಿರ್ಬಂಧಗಳ ಅಂಶವಾಗಿದೆ. ಪೂರೈಕೆಯ ಕಡೆಯಲ್ಲಿ ಕೆಲಸದ ಅವಧಿಯಲ್ಲಿ ಹೊಂದಾಣಿಕೆಯ ಕೊರತೆ ಮತ್ತು ಕೆಲಸದ ಸ್ವರೂಪ ಮಹಿಳೆಯರಿಗೆ ನಿರ್ಬಂಧವಾಗಿ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಗಳಲ್ಲಿ ತೊಡಗಿಕೊಳ್ಳುವ ಹೆಚ್ಚಿನ ಮುಂಚೂಣಿ ಮಹಿಳೆಯರು ದ್ವಿಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಅವರು ತಮ್ಮ ಕೌಟುಂಬಿಕ ಮತ್ತು ವೃತ್ತಿಪರ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ ಎಂದು ಬೆಟರ್‌ಪ್ಲೇಸ್‌ನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್ ಪ್ರವೀಣ ಅಗರವಾಲ್ ಅವರನ್ನು ಉಲ್ಲೇಖಿಸಿ ವರದಿಯು ಹೇಳಿದೆ.
ಬೇಡಿಕೆ ಕಡೆಯಲ್ಲಿನ ಸಮಸ್ಯೆಯನ್ನು ಎತ್ತಿ ತೋರಿಸಿರುವ ವರದಿಯು,ಮಹಿಳೆಯರು ಇಷ್ಟಪಡುವ ಹೆಚ್ಚಿನ ಉದ್ಯೋಗಗಳು ದಾಸ್ತಾನು ನಿರ್ವಹಣೆ ಅಥವಾ ತಯಾರಿಕೆಯಲ್ಲಿ ಬಿಡಿಭಾಗಗಳ ಜೋಡಣೆಯಂತಹ ಒಳಾಂಗಣದ್ದಾಗಿರುತ್ತವೆ ಎಂದು ಒತ್ತಿ ಹೇಳಿದೆ. 'ಈ ಉದ್ಯೋಗಗಳಲ್ಲಿ ಮಹಿಳೆಯರಿಂದ ಹೆಚ್ಚಿನ ಬೇಡಿಕೆಯನ್ನು ನಾವು ನೋಡುತ್ತಿದ್ದೇವೆ. ಆದರೆ ಅವಕಾಶಗಳ ಕುರಿತು ಹೇಳುವುದಾದರೆ ಡೆಲಿವರಿ ಎಕ್ಸಿಕ್ಯೂಟಿವ್‌ಗಳು,ನಿರ್ಮಾಣ ಕಾರ್ಮಿಕರು ಇತ್ಯಾದಿಯಂತಹ ಹೊರಾಂಗಣ ಉದ್ಯೋಗಗಳಲ್ಲಿ ಅವಕಾಶಗಳು ಹೆಚ್ಚಾಗಿವೆ. ಈ ಬೇಡಿಕೆ-ಪೂರೈಕೆ ಅಂತರವೂ ಮಹಿಳೆಯರ ಕಡಿಮೆ ಪಾಲ್ಗೊಳ್ಳುವಿಕೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ 'ಎಂದು ಅಗರವಾಲ್ ಹೇಳಿದ್ದಾರೆ.