ಕೋಲ್ಕತ್ತ: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷವು ಸಾಮಾನ್ಯ ಜನರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದೆ' ಎಂದರು.
' ಬಿಜೆಪಿಯನ್ನು ಸೋಲಿಸಲು ಬಯಸುವವರು ನಿಶ್ಚಿತವಾಗಿ ಟಿಎಂಸಿ ಅಭ್ಯರ್ಥಿಗಳಿಗೇ ಮತ ಹಾಕುತ್ತಾರೆ ಎಂಬ ನಂಬಿಕೆ ನನ್ನದು' ಎಂದು ಹೇಳಿದರು.
ಸಾಗರದಿಘಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರಾಭವಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಟಿಎಂಸಿಯನ್ನು ಸೋಲಿಸುವ ಉದ್ದೇಶದಿಂದ ಸಿಪಿಎಂ ಹಾಗೂ ಬಿಜೆಪಿ ಜೊತೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು' ಎಂದು ಆರೋಪಿಸಿದರು.
'ಈ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಮತಗಳನ್ನು ಕಾಂಗ್ರೆಸ್‌ಗೆ ಹೋಗುವಂತೆ ನೋಡಿಕೊಂಡಿದೆ. ಗೆಲುವಿಗಾಗಿ ಬಿಜೆಪಿಯ ನೆರವನ್ನು ಪಡೆದ ಕಾರಣ ಕಾಂಗ್ರೆಸ್ ತನ್ನನ್ನು ಬಿಜೆಪಿ ವಿರೋಧಿ ಪಕ್ಷ ಎಂಬುದಾಗಿ ಕರೆದುಕೊಳ್ಳುವುದನ್ನು ನಿಲ್ಲಿಸಬೇಕು' ಎಂದೂ ಹೇಳಿದರು.