ನವದೆಹಲಿ:ತ್ರಿಪುರಾ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶೇ.21ಕ್ಕೂ ಹೆಚ್ಚಿನ ಶಾಸಕರು ಕೋಟ್ಯಾಧೀಶರಾಗಿದ್ದಾರೆ ಮತ್ತು ಶೇ.16ರಷ್ಟು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ದೇಶದಲ್ಲಿ ಚುನಾವಣಾ ಸುಧಾರಣೆಗಳನ್ನು ತರಲು ಶ್ರಮಿಸುತ್ತಿರುವ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಶುಕ್ರವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ತಿಳಿಸಿದೆ.
2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಎಲ್ಲ 60 ಅಭ್ಯರ್ಥಿಗಳು ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿರುವ ಅಫಿಡವಿಟ್ಗಳನ್ನು ಎಡಿಆರ್ ವಿಶ್ಲೇಷಿಸಿದೆ. ವಿಜೇತರಲ್ಲಿ ಬಿಜೆಪಿಯ 32,ತಿಪ್ರಾ ಮೋಥಾ ಪಾರ್ಟಿ (ಟಿಎಂಪಿ)ಯ 13,ಸಿಪಿಎಮ್ನ 11,ಕಾಂಗ್ರೆಸ್‌ನ ಮೂವರು ಮತ್ತು ಐಪಿಎಫ್ಟಿಯ ಓರ್ವ ಶಾಸಕರು ಸೇರಿದ್ದಾರೆ.
ಸುಮಾರು
ಶೇ.33ರಷ್ಟು ಬಿಜೆಪಿ ಶಾಸಕರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್
ಪ್ರಕರಣಗಳಿರುವುದನ್ನು ಅಫಿಡವಿಟ್ಗಳಲ್ಲಿ ಘೋಷಿಸಿದ್ದಾರೆ. ಕಾಂಗ್ರೆಸ್ನ ಎಲ್ಲ ಮೂವರು
ಶಾಸಕರು ಕೋಟ್ಯಾಧೀಶರಾಗಿದ್ದಾರೆ.
ವಿಧಾನಸಭೆಯಲ್ಲಿನ 60 ಶಾಸಕರು ಸರಾಸರಿ 1.52
ಕೋ.ರೂ.ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಪ್ರತಿ ಶಾಸಕನಿಗೆ ಸರಾಸರಿ 4.79
ಕೋ.ರೂ.ಗಳ ಆಸ್ತಿಯೊಂದಿಗೆ ಕಾಂಗ್ರೆಸ್ ಅಗ್ರಸ್ಥಾನದಲ್ಲಿದ್ದರೆ,ನಂತರದ ಸ್ಥಾನಗಳಲ್ಲಿ
ಬಿಜೆಪಿ (ಸರಾಸರಿ 1.89 ಕೋ.ರೂ.),ಟಿಎಂಪಿ (60.92 ಲ.ರೂ.) ಮತ್ತು ಸಿಪಿಎಂ (80.11
ಲ.ರೂ.) ಇವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ.