ಉತ್ತರ ಪ್ರದೇಶ: ಮದುವೆಯಾಗಿ 22 ವರ್ಷ ಕಳೆದರೂ ಒಂದು ಬಾರಿಯ ಹೆಂಡತಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಬಾರಿ ದಂಪತಿಗಳಾಗಿ ತವರು ಮನೆಗೆ ಹೋಗಬೇಕೆಂದು ಪತ್ನಿ ಬಯಸಿದ್ದಾಳೆ. ಹೀಗಾಗಿ ನನಗೆ 10 ದಿನ ರಜೆ ನೀಡಬೇಕೆಂದು ಇನ್ಸ್‌ಪೆಕ್ಟರ್ ಒಬ್ಬರು ಎಸ್ಪಿಗೆ ಪತ್ರ ಬರೆದಿದ್ದಾರೆ.
ಇನ್ಸ್ ಪೆಕ್ಟರ್ ಮನವಿಗೆ ಸ್ಪಂದಿಸಿರುವ ಎಸ್ಪಿ 10 ದಿನ ಸಾಧ್ಯವಿಲ್ಲ ಎಂದು ಹೇಳಿ 5 ದಿನ ರಜೆ ನೀಡಿದ್ದಾರೆ.
ಇದೀಗ ಇನ್ಸ್‌ಪೆಕ್ಟರ್ ರಜೆ ಕೋರಿ ಎಸ್ಪಿಗೆ ನೀಡಿರುವ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿರುವ ಫತೇಘರ್ ಎಂಬಲ್ಲಿ. ಇಲ್ಲಿನ ಪೊಲೀಸ್ ಲೈನ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಅಶೋಕ್ ಕುಮಾರ್ ಹೋಳಿ ರಜೆ ನೀಡುವಂತೆ ಪತ್ರ ಬರೆದವರು. ಎಸ್ಪಿ ಅಶೋಕ್ ಮೀನಾ ಅವರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಮದುವೆಯಾಗಿ 22 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೆಂಡತಿಯೊಂದಿಗೆ ಹೋಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ತುಂಬಾ ಕೋಪಗೊಂಡಿದ್ದು, ಈ ವರ್ಷ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಈ ಕಾರಣಕ್ಕಾಗಿ ಹೋಳಿ ರಜೆಯ ಅವಶ್ಯಕತೆಯಿದೆ. ದಯವಿಟ್ಟು 10 ದಿನಗಳ ರಜೆ ನೀಡಿ ಎಂದು ಬರೆದುಕೊಂಡಿದ್ದಾರೆ.