ಕಾಸರಗೋಡು: ಇಪ್ಪತ್ತೈದನೇ ವಿವಾಹದ ಸಿದ್ಧತೆಯಲ್ಲಿದ್ದ ತಳಿಪರಂಬದ ವ್ಯಕ್ತಿಗೆ ನಾಗರಿಕರು ಹಲ್ಲೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ತಳಿಪರಂಬ ನಿವಾಸಿ 50ರ ಹರೆಯದ ವ್ಯಕ್ತಿ, ಈಗಾಗಲೆ 24 ಮಂದಿಯನ್ನು ವಿವಾಹಿತನಾಗಿದ್ದು, 25ನೇ ಮದುವೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ಪೊಲೀಸರ ಅತಿಥಿಯಾಗಿದ್ದಾನೆ.
ಶ್ರೀಮಂತ ವ್ಯಕ್ತಿಯಾಗಿರುವ ಈತ ಏಜೆಂಟ್ಗಳ ಸಹಾಯ ಪಡೆದು ಬಡ ಕುಟುಂಬದ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಮದುವೆಯಾದ ಯುವತಿಯರಿಗೆ ಮನೆಯನ್ನೂ ಮಾಡಿ ಕೊಡುತ್ತಿದ್ದ. ಈ ಮಧ್ಯೆ ಯುವತಿ ಸಹೋದರನೆಂದು ತಿಳಿಸಿ ತೊಕ್ಕೊಟ್ಟಿನ ವ್ಯಕ್ತಿಯೊಬ್ಬ ಯುವತಿಯನ್ನು ಪರಿಚಯಿಸಿದ್ದು, ಮದುವೆಗೆ ದಿನ ನಿಗದಿಪಡಿಸಿದ್ದ. ಮದುವೆ ದಿನ ಸಮೀಪಿಸುತ್ತಿದ್ದಂತೆ ಈತನ ಬಗ್ಗೆ ಸಂಶಯಗೊಂಡ ಕೆಲವರು ವಿಚಾರಣೆಗೊಳಪಡಿಸಿದಾಗ ಮದುವೆ ಪುರಾಣ ಹೊರಬಿದ್ದಿದೆ.
ಆದರೆ, ಲಿಖಿತ ದೂರು ಸಲ್ಲಿಕೆಯಾಗದ ಕಾರಣ ಈತನಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.