ಭುವನೇಶ್ವರ: ಒಡಿಶಾದಲ್ಲಿ ಚಾಲಕರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನದಲ್ಲಿ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವರ ಹಾಗೂ ಆತನ ಕುಟುಂಬದವರು ರಾತ್ರಿಯಿಡೀ 28 ಕಿಲೋಮೀಟರ್ ನಡೆದುಕೊಂಡು ವಧುವಿನ ಗ್ರಾಮದ ತಲುಪಿದ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ಒಡಿಶಾದ ರಾಜಗಢ ಜಿಲ್ಲೆಯ ಗ್ರಾಮವೊಂದರಿಂದ ಈ ಘಟನೆ ವರದಿಯಾಗಿದೆ.
ಕಲ್ಯಾಣಸಿಂಗ್
ಪುತ ತಾಲೂಕಿನ ಸುನಖಾಂಡಿ ಪಂಚಾಯ್ತಿಯಿಂದ ಹೊರಟ ವರ ಹಾಗೂ ಆತನ ಕುಟುಂಬದವರು ಗುರುವಾರ
ರಾತ್ರಿಯಿಡೀ ನಡೆದು ವಧುವಿನ ಗ್ರಾಮವಾದ ದಿಬಲಪಾಡು ಸೇರಿದರು. ಶುಕ್ರವಾರ ವಿವಾಹ
ಸಾಂಗವಾಗಿ ನೆರವೇರಿತು.
ಕೆಲ ಮಂದಿ ಮಹಿಳೆಯರೂ ಸೇರಿದಂತೆ ವರ ಹಾಗೂ ಆತನ ಕುಟುಂಬದ
ಸದಸ್ಯರು ರಾತ್ರಿಯಿಡೀ ನಡೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗಿದೆ.
"ಚಾಲಕರ ಮುಷ್ಕರದಿಂದಾಗಿ ಯಾವುದೇ ವಾಹನ ಸಿಗಲಿಲ್ಲ. ವಧುವಿನ ಗ್ರಾಮ ತಲುಪಲು ನಾವು ರಾತ್ರಿಯಿಡೀ ನಡೆದೆವು. ನಮಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ವರನ ಕುಟುಂಬದವರು ಹೇಳಿದ್ದಾರೆ. ಶುಕ್ರವಾರ ಬೆಳಿಗ್ಗೆ ವಿವಾಹ ನಡೆದಿದ್ದು, ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ವಧುವಿನ ಮನೆಯಲ್ಲೇ ವರನ ಕಡೆಯ ಎಲ್ಲರೂ ತಂಗಿದ್ದಾರೆ.
ವಿಮೆ, ಪಿಂಚಣಿ, ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಲಕರ ಏಕತಾ ಮಹಾಸಂಘ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ವಾಣಿಜ್ಯ ವಾಹನಗಳ ಚಾಲಕರು 90 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.