ಅಗರ್ತಲ: ಫೆ. 16ರಂದು ನಡೆದ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಮಾಣಿಕ್ ಸಹಾ ಎರಡನೇ ಅವಧಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೆ, ಇತರೆ 8 ಸಚಿವರು ಕೂಡ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗರ್ತಲದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾದರು. ಇವರ ಜೊತೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಈಶಾನ್ಯ ರಾಜ್ಯ ಚುನಾವಣಾ ಯಶಸ್ಸಿನ ರೂವಾರಿ ಹಿಮಂತ ಬಿಸ್ವಾ ಶರ್ಮಾ ಕೂಡ ಇದ್ದರು.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್. ತಮಾಂಗ್ ಕೂಡ ಉಪಸ್ಥಿತರಿದ್ದರು.
ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಶಾಂತಾ ಚಕ್ಮಾ ಮತ್ತು ಸುಶಾಂತ ಚೌಧರಿ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೂರು ಹೊಸ ಮಂತ್ರಿಗಳನ್ನು ತಮ್ಮ ಸಂಪುಟಕ್ಕೆ ಮಾಣಿಕ್ ಸಹಾ ಸೇರಿಸಿಕೊಂಡಿದ್ದ, ಬಿಪ್ಲಬ್ ದೇಬ್ ಅವರ ನಿಕಟವರ್ತಿ ಟಿಂಕು ರಾಯ್, ಬಿಜೆಪಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ಮುಖ್ಯಸ್ಥ ಬಿಕಾಶ್ ದೆಬ್ಬರ್ಮಾ ಮತ್ತು ಸುಧಾಂಶು ದಾಸ್ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಬಿಜೆಪಿಯ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಈ ಚುನಾವಣೆಯಲ್ಲಿ ಸೋತಿದ್ದರೂ ಒಂದು ಸಚಿವ ಸ್ಥಾನವನ್ನು ಪಡೆದುಕೊಂಡಿದೆ. ಸುಕ್ಲಾ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ಪ್ರತಿಪಕ್ಷ ಸಿಪಿಎಂ ಮತ್ತು ಕಾಂಗ್ರೆಸ್ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದವು.