ಅಮರಾವತಿ: ಹಿಂದೂ ಧರ್ಮದ ರಕ್ಷಣೆಗಾಗಿ ಆಂಧ್ರಪ್ರದೇಶದಲ್ಲಿ ಹಳ್ಳಿಗೊಂದು ದೇವಾಲಯ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸುಮಾರು ಮೂರು ಸಾವಿರ ದೇಗುಲಗಳನ್ನು ನಿರ್ಮಿಸುವ ಬಹುದೊಡ್ಡ ಯೋಜನೆ ಹಾಕಿಕೊಂಡಿದೆ.
ಹಿಂದೂಗಳ ಧಾರ್ಮಿಕ ನಂಬಿಕೆಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮುಖ್ಯಮಂತ್ರಿ ವೈ.ಎಸ್.
ಜಗನ್‌ಮೋಹನ ರೆಡ್ಡಿ ಅವರ ನಿರ್ದೇಶನದಂತೆ ಈ ಉಪಕ್ರಮವನ್ನು ರಾಜ್ಯಸರ್ಕಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದ್ದಾರೆ.
ಸಮಾಜದ ದುರ್ಬಲ ವರ್ಗಗಳಿರುವ ಪ್ರದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ಭಾರಿ ಸಂಖ್ಯೆಯಲ್ಲಿ ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಖಾತೆ ಸಚಿವರೂ ಆದ ಸತ್ಯನಾರಾಯಣ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಾರಂಭಿಕವಾಗಿ 1,330 ದೇವಾಲಯಗಳ ನಿರ್ಮಾಣಕ್ಕೆ ತಲಾ ₹10 ಲಕ್ಷ ಅನುದಾನವನ್ನು ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವಾಣಿ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ 1,465 ದೇವಸ್ಥಾನಗಳನ್ನು ನಿರ್ಮಿಸಲು ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಕೆಲವು ಶಾಸಕರ ಕೋರಿಕೆ ಮೇರೆಗೆ 200 ದೇಗುಲಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯಡಿ 978 ದೇವಾಲಯಗಳ ನಿರ್ಮಾಣ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಲವು ದೇವಾಲಯಗಳ ಪುನರುಜ್ಜೀವನ ಮತ್ತು ದೇವಾಲಯಗಳಲ್ಲಿನ ಆಚರಣೆಗಳಿಗಾಗಿ ಹಂಚಿಕೆ ಮಾಡಿರುವ ₹270 ಕೋಟಿ ಅನುದಾನದಲ್ಲಿ ಈಗಾಲೇ ₹238 ಕೋಟಿ ಬಿಡುಗಡೆ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.