ಭೋಪಾಲ: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಪಟೇಲ್ ನಗರ್ ಪ್ರದೇಶದಲ್ಲಿರುವ ಬಾಲೇಶ್ವರ ಝಲೆಲಾಲ್ ಮಹಾದೇವ(Baleshwar Mahadev Jhulelal) ದೇವಾಲಯದಲ್ಲಿ ಬಾವಿಯ ಸಿಮೆಂಟ್ ಹಾಸು ಕುಸಿದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರು ಸಂಖ್ಯೆ ಶುಕ್ರವಾರ 35ಕ್ಕೆ ಏರಿಕೆಯಾಗಿದೆ.
''ಸೇನೆ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ(SDRF) ನ ನೆರವಿನೊಂದಿಗೆ ನಮ್ಮ ಶೋಧ ಕಾರ್ಯಾಚರಣೆ ಮುಗಿಯುವ ಹಂತಕ್ಕೆ ಬಂದಿದೆ.
ಬಾವಿಯಿಂದ 35 ಮೃತದೇಹಗಳನ್ನು ಹೊರ ತೆಗೆಯಲಾಗಿದೆ'' ಎಂದು ಇಂದೋರ್ನ ಜಿಲ್ಲಾಧಿಕಾರಿ ಇಳಯ ರಾಜ ಟಿ. ಅವರು ತಿಳಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾದ ಹೆಸರುಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರ ಮೃತದೇಹಗಳು ಪತ್ತೆಯಾಗಿವೆ. ಬಾವಿಯಲ್ಲಿ ಕೆಸರು ತುಂಬಿದ್ದು, ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಕೆಸರು ಮೇಲೆತ್ತಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan) ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಹಾಗೂ ಘಟನಾ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಎಫ್‌ಐಆರ್ ದಾಖಲಿಸಾಗಿದೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಈ ದುರಂತಕ್ಕೆ ಹೊಣೆಗಾರರಾಗಿರುವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಳಯರಾಜ ತಿಳಿಸಿದ್ದಾರೆ.