ನವದೆಹಲಿ: ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿರುವ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾರ್ಚ್ 3ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಆರ್‌ಎಸ್‌ಎಸ್ ಪಥಸಂಚಲನವು ಮಾರ್ಚ್ 5ಕ್ಕೆ ನಿಗದಿಯಾಗಿರುವುದರಿಂದ ಅದಕ್ಕಿಂತ ಮೊದಲೇ ಅರ್ಜಿ ವಿಚಾರಣೆ ನಡೆಸುವಂತೆ ತಮಿಳುನಾಡು ಸರ್ಕಾರದ ಪರ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಮನವಿ ಮಾಡಿದರು.
ಇದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು ಮಾ.3ರಂದು ವಿಚಾರಣೆ ನಡೆಸುವುದಾಗಿ ಹೇಳಿತು.
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆರು ಜಿಲ್ಲೆಗಳಲ್ಲಿ ಬಹಿರಂಗವಾಗಿ ಪಥಸಂಚಲನ ನಡೆಸಲು ರಾಜ್ಯಸರ್ಕಾರ ಆರ್‌ಎಸ್‌ಎಸ್‌ಗೆ ಅನುಮತಿಯನ್ನು ನಿರಾಕರಿಸಿತ್ತು. ಆದರೆ ಮೈದಾನಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಮತಿ ನೀಡಿತ್ತು. ಇದನ್ನು ಏಕ ಸದಸ್ಯಪೀಠ ಸಹ ಎತ್ತಿಹಿಡಿದಿತ್ತು. ಆದರೆ, ಫೆ.10ರಂದು ಈ ಕುರಿತು ತೀರ್ಪು ನೀಡಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಆರೂ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿ ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿತ್ತು ಎಂದು ಮುಕುಲ್ ಅವರು ಪೀಠಕ್ಕೆ ತಿಳಿಸಿದರು.
ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿದೆ.