ಆಗ್ರಾ: ಭಾರತೀಯ ರೈಲ್ವೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಇಲಾಖೆ ನೀಡಿದ ಉತ್ತರದಿಂದ ಬಹಿರಂಗವಾಗಿದೆ. ಸಿ ಗುಂಪಿನ ಒಟ್ಟು 14,75,623 ಹುದ್ದೆಗಳ ಪೈಕಿ 3.11 ಲಕ್ಷ ಖಾಲಿ ಇದ್ದರೆ, ಗಜೆಟೆಡ್ ಅಧಿಕಾರಿಗಳ 18,881 ಹುದ್ದೆಗಳ ಪೈಕಿ 3018 ಹುದ್ದೆಗಳು ಖಾಲಿ ಇವೆ.
ದೇಶದ 39 ರೈಲ್ವೆ ವಲಯಗಳು ಹಾಗೂ ಉತ್ಪಾದನಾ ಘಟಕಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಇಲ್ಲ ಎನ್ನುವುದು ಟೈಮ್ಸ್ ಆಫ್ ಇಂಡಿಯಾ ಬಾತ್ಮೀದಾರ ಕೇಳಿದ ಆರ್‌ಟಿಐ ಪ್ರಶ್ನೆಗೆ ಇಲಾಖೆ ಉತ್ತರಿಸಿದೆ.
ಖಾಲಿ ಇರುವ 3,11,438 ಗ್ರೂಪ್ ಸಿ ಹುದ್ದೆಗಳ ಪೈಕಿ ಟ್ರ್ಯಾಕ್‌ಮನ್, ಪಾಯಿಂಟ್ಸ್‌ಮನ್, ಗುಮಾಸ್ತ ಹುದ್ದೆಗಳು, ಸಿಗ್ನಲ್ ಮತ್ತು ಟೆಲಿಕಾಂ ಸಹಾಯಕರ ಹುದ್ದೆಗಳು ಸೇರಿವೆ. "ಗ್ರೂಪ್ ಸಿ ಖಾಲಿ ಹುದ್ದೆಗಳ ಪೈಕಿ ಬಹುತೇಕ ಹುದ್ದೆಗಳು ಎಂಜಿನಿಯರ್, ಟೆಕ್ನೀಶಿಯನ್, ಕ್ಲರ್ಕ್, ಗಾರ್ಡ್/ರೈಲ್ವೆ ವ್ಯವಸ್ಥಾಪಕರು, ಸ್ಟೇಷನ್ ಮಾಸ್ಟರ್, ಟಿಕೆಟ್ ಕಲೆಕ್ಟರ್ ಹುದ್ದೆಗಳು. ಇದು ದೈನಂದಿನ ರೈಲ್ವೆ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ ಎಂದು ಉತ್ತರ ಕೇಂದ್ರ ರೈಲ್ವೆ ಉದ್ಯೋಗಿಗಳ ಸಂಘದ ಮುಖಂಡರು ಹೇಳಿದ್ದಾರೆ.
"ಖಾಲಿ ಹುದ್ದೆ ವಿಚಾರ ಪಿಎನ್‌ಎಂ ಸಭೆಯಲ್ಲಿ ನಿಯತವಾಗಿ ಚರ್ಚೆಗೆ ಬರುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಆಡಳಿತಗಾರರಿಗೆ ಸಮಸ್ಯೆಯ ಅರಿವು ಇದೆ. ಆದರೆ ಸರ್ಕಾರ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳುವ ಬದಲು ಖಾಸಗೀಕರಣಕ್ಕೆ ಹೆಚ್ಚು ಒಲವು ಹೊಂದಿದೆ" ಎನ್ನುವುದು ಅವರ ಅಭಿಮತ.
ಅಂಕಿ ಅಂಶಗಳ ಪ್ರಕಾರ, ಉನ್ನತ ಮಟ್ಟದಲ್ಲಿ ಅಂದರೆ ರೈಲ್ವೆ ಸಚಿವಾಲಯದಲ್ಲಿ ಒಂಬತ್ತು ಹುದ್ದೆಗಳ ಪೈಕಿ 5 ಖಾಲಿ ಇವೆ. 59 ಉನ್ನತ ಆಡಳಿತಾಧಿಕಾರಿ ಗ್ರೂಪ್ + ಹುದ್ದೆಗಳ ಪೈಕಿ 23 ಖಾಲಿ ಇದ್ದರೆ, ಉನ್ನತ ಆಡಳಿತಗಾರರ ಗುಂಪಿನ 1700 ಹುದ್ದೆಗಳ ಪೈಕಿ 77 ಭರ್ತಿಯಾಗಿಲ್ಲ. ಭಾರತೀಯ ರೈಲ್ವೆಯ ಲೆಕ್ಕಪತ್ರ ವಿಭಾಗದಲ್ಲಿ 289 ಹುದ್ದೆಗಳು, ಸಿಬ್ಬಂದಿ ಸೇವಾ ವಿಭಾಗದಲ್ಲಿ 100, ಸಿಬ್ಬಂದಿ ಸೇವಾ ವಿಭಾಗದಲ್ಲಿ 260 ಹಾಗೂ ಸಿಗ್ನಲ್ ಎಂಜಿನಿಯರ್ಸ್ ಹುದ್ದೆಗಳ ಪೈಕಿ 154 ಖಾಲಿ ಇವೆ.