ನವದೆಹಲಿ: ಅಮೃತ್ ಸರೋವರ ಯೋಜನೆ ಅಡಿ ಕಳೆದ 11 ತಿಂಗಳಲ್ಲಿ ಅಂದಾಜು 40,000 ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಯೋಜನೆಯ ಶೇ 80ರಷ್ಟು ಗುರಿಯನ್ನು ಸಾಧಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕಳೆದ ವರ್ಷ ಏಪ್ರಿಲ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ 'ಆಜಾದಿ ಕಾ ಅಮೃತ್ ಮಹೋತ್ಸವ' ಯೋಜನೆಯ ಭಾಗವಾಗಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿತ್ತು.
ಈ ವರ್ಷದ ಆಗಸ್ಟ್ 15ರ ಒಳಗಾಗಿ ಯೋಜನೆಯಡಿ 50,000 ಜಲಮೂಲಗಳ ಅಭಿವೃದ್ಧಿಯ ಗುರಿ ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಈಗಾಗಲೇ 40,000 ಜಲಮೂಲಗಳ ಅಭಿವೃದ್ಧಿಯಾಗಿದ್ದು, ಯೋಜನೆಯ ಶೇ 80 ಕೆಲಸ ಮುಗಿದಿದೆ ಎಂದು ಸಚಿವಾಲಯ ತಿಳಿಸಿದೆ.
ಯೋಜನೆಯ ಅಡಿಯಲ್ಲಿ ಜನರ ಸಹಭಾಗಿತ್ವವನ್ನು ಪ್ರಮುಖ ಅಂಶವಾಗಿ ತೆಗೆದುಕೊಂಡು, ಅಮೃತ್ ಸರೋವರಗಳನ್ನು ಅಭಿವೃದ್ಧಿಪಡಿಸಲು 54,088 ಬಳಕೆದಾರರ ಗುಂಪುಗಳನ್ನು ರಚಿಸಲಾಗಿದೆ. ಈ ಬಳಕೆದಾರರ ಗುಂಪುಗಳು ಅಮೃತ್ ಸರೋವರ ಅಭಿವೃದ್ಧಿಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ಇಲ್ಲಿಯವರೆಗೆ, 1,784 ಸ್ವಾತಂತ್ರ್ಯ ಹೋರಾಟಗಾರರು, 18,173 ಪಂಚಾಯಿತಿಗಳ ಹಿರಿಯ ಸದಸ್ಯರು, 448 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರು, 684 ಹುತಾತ್ಮರ ಕುಟುಂಬದ ಸದಸ್ಯರು ಮತ್ತು 56 ಪದ್ಮ ಪ್ರಶಸ್ತಿ ಪುರಸ್ಕೃತರು ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ.
ನೀರಾವರಿ, ಮೀನುಗಾರಿಕೆ, ಪಶುಸಂಗೋಪನೆಯಂತಹ ಚಟುವಟಿಕೆಗಳೊಂದಿಗೆ ಜಲಮೂಲಗಳನ್ನು ಗುರುತಿಸಿರುವುದರಿಂದ ಯೋಜನೆಯು ಗ್ರಾಮೀಣ ಜೀವನೋಪಾಯವನ್ನು ಉತ್ತೇಜಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.