ನವದೆಹಲಿ: 40 ವರ್ಷಗಳ ಕೆಳಗೆ ಪತ್ನಿಯನ್ನು ಕೊಂದಿದ್ದ ಆರೋಪ ಹೊತ್ತಿದ್ದ 64 ವರ್ಷ ವಯಸ್ಸಿನ ವ್ಯಕ್ತಿಯನ್ನು ಮೊಕದ್ದಮೆಯಿಂದ ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
1983ರಲ್ಲಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಈ ಕೊಲೆ ಪ್ರಕರಣದ ನಡೆದಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಹೈಕೋರ್ಟ್ 2008ರಲ್ಲಿ ನಿಖಿಲ್ ಚಂದ್ರ ಮಂಡಲ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು, ನ್ಯಾಯಾಂಗದ ಹೊರಗೆ ತಪ್ಪೊಪ್ಪಿಗೆ ಆಧಾರದಲ್ಲಿ ನಿಖಿಲ್ ಅವರ ದೋಷ ಸಾಬೀತುಪಡಿಸಿರುವುದು ನ್ಯಾಯಬದ್ಧವಲ್ಲ ಎಂದು ಹೇಳಿದೆ.
ಈ ಮೊದಲು ಪ್ರಕರಣದ ತನಿಖೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ನಿಖಿಲ್ ಅವರನ್ನು ಪ್ರಕರಣದಿಂದ 1987ರ ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಿತ್ತು.
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೆಗೆದುಕೊಂಡ ನಿಲುವು ನ್ಯಾಯಬದ್ಧವಾಗಿದೆ. ಆದರೆ, ನ್ಯಾಯಾಂಗದ ಹೊರಗೆ ತಪ್ಪೊಪ್ಪಿಗೆ ಆಧಾರದಲ್ಲಿ ಹೈಕೋರ್ಟ್ ಪರಿಗಣಿಸಿರುವ ಸಾಕ್ಷ್ಯಗಳು ನಂಬಲಾರ್ಹವಾಗಿವೆ. ನ್ಯಾಯಾಂಗದ ಹೊರಗಿನ ತಪ್ಪೊಪ್ಪಿಗೆಯು ದುರ್ಬಲ ಸಾಕ್ಷ್ಯವಾಗಿರುತ್ತದೆ ಮತ್ತು ಇದು ಊಹೆಗಳಿಂದ ಕೂಡಿರುತ್ತದೆ ಎಂಬುದು ಸ್ಥಾಪಿತ ನಿಯಮವಾಗಿದೆ ಎಂದು ಪೀಠ ಹೈಕೋರ್ಟ್‌ನ ಕಿವಿ ಹಿಂಡಿದೆ.