HEALTH TIPS

ಮೋಟಾರು ಯುಗದಲ್ಲೂ ಬಿಡದ ಸೈಕಲ್ ಪ್ರೀತಿ: 42ವರ್ಷಗಳ ಸುದೀರ್ಘ ಸೇವೆಯ ನಂತರ ಅಂಚೆ ಅಣ್ಣ ಸತೀಶ್ ಕೂಡ್ಲುಗೆ ವಿದಾಯ


               ಕಾಸರಗೋಡು: ದೀರ್ಘ ಕಾಲ ಅಂಚೆ ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದು, ಕನ್ನಡಿಗರ ಪ್ರತಿನಿಧಿಯಾಗಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಸೈಕಲ್ ಸತೀಶ್ ಎಂದೇ ಗುರುತಿಸಿಕೊಂಡಿರುವ ಕೂಡ್ಲು ನಿವಾಸಿ ಬಿ.ಸತೀಶ್ ಅವರು ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ. ಅಂಚೆ ಅಣ್ಣನಾಗಿ ತಮ್ಮ ವೃತ್ತಿ ಜೀವನದುದ್ದಕ್ಕೂ ಸೈಕಲ್ ಪಯಣ ಮುಂದುವರಿಸಿಕೊಂಡು ಬಂದಿರುವ ಸತೀಶಣ್ಣ ಅವರ ಹೆಸರಿನೊಂದಿಗೆ ಸೈಕಲ್ ಸೇರ್ಪಡೆಗೊಂಡಿದ್ದು, ಇವರ ಗುರುತಿಗೆ ಪ್ರಧಾನ ಭಾಗವಾಗಿದೆ.
          ಸುದೀರ್ಘ 42 ವರ್ಷ ಸೇವೆ ಸಲ್ಲಿಸಿರುವ ಇವರು, 30 ವರ್ಷ ಕೂಡ್ಲು ಅಂಚೆ ಕಚೇರಿಯಲ್ಲಿ ಇ.ಡಿ.ಎಂ.ಸಿ.ಯಾಗಿ ಕರ್ತವ್ಯ ಸಲ್ಲಿಸಿದ್ದಾರೆ. ಅಲ್ಲಿಂದ ಬಡ್ತಿಗೊಂಡು ಸತತ 12 ವರ್ಷಗಳ ಕಾಲ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಎಂ.ಟಿ.ಎಸ್ ಪದವಿಯಲ್ಲಿ ದುಡಿದಿದ್ದಾರೆ. ಕನ್ನಡಿಗರು ಮತ್ತು ಸಹೋದರ ಭಾಷಿಗರು ಯಾವುದೇ ಸೇವೆ ಬಯಸಿ ಬಂದಾಗ ಸ್ವಯಂ ಪ್ರೇರಿತರಾಗಿ ಅವರಿಗೆ ಬೇಕಾದ ವಿಷಯಗಳನ್ನು ಒದಗಿಸಿಕೊಡುವ ಮೂಲಕ ಇವರು ಜನಾನುರಾಗಿಯಾಗಿದ್ದಾರೆ. ಇವರ ನಗುಮುಗದ ಸೇವೆ ಜನರನ್ನು ಹೆಚ್ಚು ಆಪ್ತರಾಗುವಂತೆ ಮಾಡಿದೆ. ಇವರ ಸೇವಾವಧಿಯಲ್ಲಿ ರಜೆ ಮಾಡಿದುದೇ ಅಪರೂಪ ಎಂಬುದು ಗಮನಾರ್ಹ. ಕೋವಿಡ್ ಮಹಾಮಾರಿಯ ಅವಧಿಯಲ್ಲೂ ಪ್ರತಿನಿತ್ಯ ಕಚೇರಿಗೆ ತೆರಳಿಯೇ ಕರ್ತವ್ಯ ನಿರ್ವಹಿಸಿದ್ದರು. ಈ ಕಾಲಘಟ್ಟದಲ್ಲಿ ಕಾಸರಗೋಡು ಸರ್ಕಾರಿ ಆಸ್ಪತ್ರೆ, ಪೆರಡಾಲದಲ್ಲಿ ಕೆಲವು ತುರ್ತು ರೋಗಿಗಳಿಗೆ ಚಿಕಿತ್ಸೆಗೆ ಬೇಕಾದ ಔಷಧಿ ಸಹಿತ ಸಾಮಾಗ್ರಿಗಳ ಪೂರೈಕೆ, ಅಂಚೆ ಮೂಲಕದ ಔಷಧಿಗಳ ವಿತರಣೆ, ಕುಂಬಳೆ, ಪೆರಡಾಲ, ಬೇಕಲ, ಉಳ್ಳೋಡಿ ಸಹಿತ ಅಂಚೆಕಚೇರಿಗಳಿಗಿರುವ ಹಣಕಾಸು ಪೂರೈಕೆ ಇತ್ಯಾದಿಗಳನ್ನು ವಿಳಂಬವಿಲ್ಲದೆ ಪೂರೈಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
                   ಸೈಕಲ್ ತುಳಿಯುತ್ತಾ ಬದುಕು ಸಾಗಿಸಿಕೊಂಡು ಬಂದಿರುವ ಸತೀಶ್ ಅವರ ಸೈಕಲ್ ಸವಾರಿಗೆ ಐದು ದಶಕದ ನಂಟಿದೆ. ಶಾಲಾ ದಿನಗಳಲ್ಲೇ ಸೈಕಲ್ ತುಳಿಯಲಾರಂಭಿಸಿದ ಸತೀಸ್ ಅವರು ಕಾಲೇಜು ದಿನಗಳಲ್ಲೂ ಅದನ್ನು ಮುಂದುವರಿಸಿ, ವೃತ್ತಿ ಜೀವನಕ್ಕೂ ಅದನ್ನು ಜೋಡಿಸಿಕೊಂಡಿದ್ದಾರೆ. ಮೋಟಾರು ಯುಗದಲ್ಲೂ ಇವರು ಬೈಕ್ ಯಾ ಸ್ಕೂಟಿ ಖರೀದಿಗೆ ಮನಮಾಡಿಲ್ಲ. ಇವರ ಸೇವಾ ತತ್ಪರತೆಗಾಗಿ  ಕಾಸರಗೋಡಿನ ಕೇಂದ್ರೀಯ ವಿದ್ಯಾಲಯ ನಂಬ್ರ-1 ಇವರನ್ನು'ಅತ್ಯುತ್ತಮ ಅಂಚೆ ಸಿಬ್ಬಂದಿ'ಎಂಬ ಬಿರುದು ನೀಡಿ ಗೌರವಿಸಿದೆ. ವಿವಿಧ ಸಂಘ ಸಂಸ್ಥೆಗಳು ಇವರ ಸೇವೆ ಗುರುತಿಸಿ ಗೌರವಿಸಿದೆ. ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, 2008 ರಲ್ಲಿ 'ಕೆಳದಿ ರಾಜ ಕುಟುಂಬಸ್ಥರ ಚರಿತ್ರೆ'ಎಂಬ ಪುಸ್ತಕವನ್ನೂ ಇವರು ರಚಿಸಿದ್ದಾರೆ.



            ಅಭಿಮತ:
          ಸೈಕಲ್ ಸವಾರಿ ದೈಹಿಕ ಕ್ಷಮತೆ ಹೆಚ್ಚಿಸಿದೆ. ಸೈಕಲ್ ಮೇಲಿನ ಸಂಚಾರ ಜೀವನದ ಅಂಗವಾಗಿ ಬದಲಾಗಿದ್ದು, ಕಳೆದ 34ವರ್ಷಗಳಿಂದ ಒಂದೇ ಸೈಕಲನ್ನು ಬಳಸುತ್ತಿದ್ದೇನೆ. ಆರೋಗ್ಯ ಕಾಪಾಡುವಲ್ಲೂ ಸೈಕಲ್ ಸಹಕಾರಿಯಾಗಿದೆ. ದ್ವಿಚಕ್ರ ವಾಹನ ಚಾಲನೆ ಅರಿತಿದ್ದರೂ, ಖರೀದಿಗೆ ಮನಸ್ಸು ಮಾಡಿಲ್ಲ.
ಸತೀಶ್ ಬಿ,
ಅಂಚೆ ಇಲಾಖೆ ಸಿಬ್ಬಂದಿ

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries