ತಿರುವನಂತಪುರ: ಮನೆ ಮಾರಾಟಕ್ಕಿದೆ, ಸೈಟ್ ಮಾರಾಟಕ್ಕಿದೆ, ತೋಟ ಮಾರಾಟಕ್ಕಿದೆ ಎಂದೆಲ್ಲ ಜಾಹೀರಾತು ಫಲಕ ನೇತು ಹಾಕುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕಿಡ್ನಿ-ಲಿವರ್ ಮಾರಾಟಕ್ಕಿದೆ ಜಾಹೀರಾತು ಫಲಕ ನೇತು ಹಾಕಿರುವುದು ಗಮನ ಸೆಳೆದಿದೆ.
ಮಾತ್ರವಲ್ಲ, ಇದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಕೇರಳದ ತಿರುವನಂತಪುರದ 50 ವರ್ಷದ ವ್ಯಕ್ತಿ ಸಂತೋಷ್ಕುಮಾರ್ ಎಂಬಾತ ಈ ಜಾಹೀರಾತು ಪ್ರದರ್ಶಿಸಿದ್ದಾನೆ. ಈತ ತನಗೆ ಸಂಬಂಧಿಸಿದ ವಿವಾದಿತ ಕಟ್ಟಡದಲ್ಲೇ ಈ ಫಲಕ ಹಾಕಿದ್ದು, ಅದರಲ್ಲಿ ಸಂಪರ್ಕಕ್ಕಾಗಿ ಎರಡು ಮೊಬೈಲ್ಫೋನ್ ನಂಬರ್ಗಳನ್ನೂ ಹಾಕಿದ್ದಾನೆ. ಇದು ಸಾರ್ವಜನಿಕರ ಮೊಬೈಲ್ಫೋನ್ಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.
ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಸಂತೋಷ್ ಕುಮಾರ್ ಅಲ್ಲಿ ಅತಿಯಾದ ಭಾರವನ್ನು ಎತ್ತುವಾಗ ಅವಘಡಕ್ಕೆ ಒಳಗಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಅದಕ್ಕಾಗಿ ಚಿಕಿತ್ಸೆಗೆ ದುಬಾರಿ ಖರ್ಚು ಮಾಡಬೇಕಾಗಿದೆ. ಚಿಕಿತ್ಸೆ ಖರ್ಚಿಗೆ ಬೇಕಾದ ಹಣವನ್ನು ಆಸ್ತಿ ಮಾರಿ ಹೊಂದಿಸಬೇಕು ಎಂದುಕೊಂಡ ಸಂತೋಷ್ಗೆ ಆತನ ಸಹೋದರ ತಕರಾರು ತೆಗೆದಿದ್ದಾನೆ. ಹೀಗಾಗಿ ಆತ ಆ ಮೂಲಕ ಹಣ ಹೊಂದಿಸುವುದು ಸಾಧ್ಯವಾಗಿಲ್ಲ. ಸಂತೋಷ್ ಪತ್ನಿ ಟ್ಯೂಷನ್ ನೀಡಿ ಜೀವನ ನಿರ್ವಹಿಸುತ್ತಿದ್ದು, ಆಕೆಯ ಬಳಿಯೂ ಹಣವಿಲ್ಲ. ಹೀಗಾಗಿ ಕೊನೆಗೆ ಬೇರೆ ದಾರಿ ಇಲ್ಲದೆ ಆ ವಿವಾದಿತ ಕಟ್ಟಡದ ಮೇಲೇ ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂಬ ಫಲಕ ಹಾಕಿದ್ದಾನೆ.