ಕೊಚ್ಚಿ: ''ಹವಾಮಾನ ಬದಲಾವಣೆ ನಿರ್ವಹಣೆ ಸೂಚ್ಯಂಕ 2023ರ ಪ್ರಕಾರ, ಭಾರತವು ಅತ್ಯುನ್ನತ ಸ್ಥಾನ ಪಡೆದಿರುವ ಜಿ20 ದೇಶವಾಗಿದೆ'' ಹಾಗೂ ಅದು ''ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡುತ್ತಿರುವ ದೇಶಗಳ ಪೈಕಿ ಐದನೇ ಸ್ಥಾನ ಹೊಂದಿದೆ'' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
''ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತವೂ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಹಾಗಾಗಿ, ನಮ್ಮ ಇಂಧನ ಬೇಡಿಕೆಯು ಹಲವು ಪಟ್ಟು ಏರುವ ಸಾಧ್ಯತೆಯಿದೆ. ನಮ್ಮೆದುರು ಇರುವ ಸವಾಲುಗಳು ಎರಡು: ಒಂದನೆಯದು, ಇಂಧನ ಬೇಡಿಕೆಯಲ್ಲಿ ಆಗುವ ಹೆಚ್ಚಳವನ್ನು ಈಡೇರಿಸುವುದು; ಮತ್ತು ಎರಡನೆಯದು, ಪೆಟ್ರೋಲಿಯಮ್ನಿಂದ ನವೀಕರಿಸಬಹುದಾದ ಇಂಧನ ಮೂಲಗಳಿಗೆ ವೇಗವಾಗಿ ಪರಿವರ್ತನೆಯಾಗುವುದು'' ಎಂದು ಕೇರಳದ ಕೊಚ್ಚಿಯಲ್ಲಿ ನಡೆದ 17ನೇ ಕೆ.ಪಿ. ಹೋರ್ಮಿಸ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್ ಹೇಳಿದರು.
''ನಮ್ಮ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಹವಾಮಾನ ಬದಲಾವಣೆಯನ್ನು ಕಡಿಮೆಗೊಳಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಅಗಾಧ ಹೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಇದು ಅಗತ್ಯವಾಗಿದೆ. ಈ ಸವಾಲುಗಳನ್ನು ನಿಭಾಯಿಸುವ ಜಾಗತಿಕ ಪ್ರಯತ್ನಗಳಲ್ಲಿ, ಕೋಯಲೀಶನ್ ಫಾರ್ ಡಿಸಾಸ್ಟರ್ ರೆಸಿಲಿಯಂಟ್ ಇನ್ಫ್ರಾಸ್ಟ್ರಕ್ಚರ್ (ಸಿಡಿಆರ್‌ಐ)4 ಮುಂತಾದ ಜಾಗತಿಕ ವೇದಿಕೆಗಳ ಮೂಲಕ ಭಾರತವು ನಾಯಕತ್ವ ವಹಿಸಿಕೊಂಡಿದೆ'' ಎಂದು ಆರ್ಬಿಐ ಗವರ್ನರ್ ಹೇಳಿದರು.