ನವದೆಹಲಿ: ಭಾರತದಲ್ಲಿ 60 ಅಥವಾ ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಲ್ಲಿ 1 ಕೋಟಿಗೂ ಹೆಚ್ಚು ಜನರು ಮರೆವಿನ ಕಾಯಿಲೆಯಿಂದ (ಡಿಮೆನ್ಶಿಯಾ) ಬಳಲುತ್ತಿರಬಹುದು ಎಂದು 'ನ್ಯೂರೊಪಿಡೆಮಿಲಾಜಿ' ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿರುವ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಈ ಅಧ್ಯಯನ ನಡೆಸಲಾಗಿದೆ. 31,477 ಹಿರಿಯ ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದೆ.
60 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಯೋಮಾನದ 1.08 ಕೋಟಿ ಜನರಲ್ಲಿ ಶೇ 8.44ರಷ್ಟು ಜನರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಮೆರಿಕ, ಬ್ರಿಟನ್‌ನಲ್ಲಿಯ ಮರೆವಿನ ಕಾಯಿಲೆ ದರಕ್ಕೆ ಹೋಲಿಸಿದರೆ ಭಾರತದ ದರ ಹೆಚ್ಚೇ ಇದೆ. ವಯೋವೃದ್ಧರು, ಮಹಿಳೆಯರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿಯ ಸಹ ಲೇಖಕ ಹಾವೋಮಿಯಾವೊ ಜಿನ್ ಅವರು ಹೇಳಿದ್ದಾರೆ.
ನಮಗೆ ದೊರೆತ ಅಂಕಿಅಂಶಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದಿದ್ದಾರೆ.
ಈ ಅಧ್ಯಯನಕ್ಕಾಗಿ ಇಂಗ್ಲೆಂಡ್‌ನ ಸರ್ರೇ ವಿಶ್ವವಿದ್ಯಾಲಯ, ಅಮೆರಿಕದ ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಮಿಶಿಗನ್ ವಿಶ್ವವಿದ್ಯಾಲಯ, ಭಾರತದ ಏಮ್ಸ್ ಸಂಸ್ಥೆಗಳು ಜಂಟಿಯಾಗಿ ಎಐ ಕಲಿಕಾ ಮಾದರಿಯನ್ನು ಅಭಿವೃದ್ಧಿಪಡಿಸಿದ್ದವು.