ಕುಂಬಳೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಗುರಿ ತಲುಪುವ ಹಂತದಲ್ಲಿದೆ. ರಾಜ್ಯದ ಗಡಿ ಭಾಗವಾಗಿರುವ ತಲಪ್ಪಾಡಿಯಿಂದ ಕುಂಜತ್ತೂರು ಪರಿಸರದಿಂದ ಕುಂಬಳೆ ವರೆಗಿನ ಷಟ್ಪಥ ರಸ್ತೆಯಲ್ಲಿ ವಾಹನಗಳು ಸಂಚಾರ ಆರಂಭಿಸಿವೆ. ಈ ಹಿಂದೆ ಟ್ರಾಫಿಕ್ ಜಾಮ್ ತೀವ್ರವಾಗಿದ್ದ ಕಡೆಗಳಲ್ಲಿ ದಟ್ಟಣೆಗಳಿಲ್ಲದೆ ಪ್ರಯಾಣ ವೇಗವಾಗಿದೆ ಎನ್ನುತ್ತಾರೆ ಸ್ಥಳೀಯರು. ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೂರು ರೀಚ್‍ಗಳಲ್ಲಿ ನಡೆಯುತ್ತಿದೆ.
ಜಿಲ್ಲೆಯ ತಲಪ್ಪಾಡಿಯಿಂದ ದಕ್ಷಿಣದ ಗಡಿ ಕಾಲಿಕಡವ್‍ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2024ರ ಮೇ ವೇಳೆಗೆ ಪೂರ್ಣಗೊಳಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದಾಜಿಸಿದೆ. ಸದ್ಯ ವಿವಿಧೆಡೆ ಮುಖ್ಯರಸ್ತೆ ಹಾಗೂ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 39 ಕಿ.ಮೀ.ಗಳ ಪೈಕಿ ಎರಡು ಮೇಲ್ಸೇತುವೆ, 16 ಕೆಳಸೇತುವೆಗಳು, ಎರಡು ಮೇಲ್ಸೇತುವೆಗಳು, ನಾಲ್ಕು ಪ್ರಮುಖ ಸೇತುವೆಗಳು ಮತ್ತು ನಾಲ್ಕು ಚಿಕ್ಕ ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ‘ಉರಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ’ ನಿರ್ಮಾಣದ ಹೊಣೆ ಹೊತ್ತಿದೆ.
ಮುಂದಿನ ವರ್ಷ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಳಿಸುವ ಗುರಿಯೊಂದಿಗೆ ಕಾಮಗಾರಿ ಪ್ರಗತಿಯಲ್ಲಿದೆ. ತಲಪ್ಪಾಡಿ-ಚೆಂಗಳ ರೀಚ್‍ನಲ್ಲಿ ಉಪ್ಪಳ ಮತ್ತು ಕಾಸರಗೋಡಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಕಾಸರಗೋಡಿನಲ್ಲಿ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬಹುದು. ಉಪ್ಪಳದಲ್ಲಿ ಮೇಲ್ಸೇತುವೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆಗೆ ಕಾಯಲಾಗುತ್ತಿದೆ.
ಉಪ್ಪಳ, ಶಿರಿಯಾ, ಕುಂಬಳೆ, ಮೊಗ್ರಾಲ್‍ನಲ್ಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈಗಿರುವ ಮೂರು ಸೇತುವೆಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಯಾಗಲಿದೆ. ಮಂಜೇಶ್ವರ, ಪೊಸೋಟ್, ಮಂಗಲ್ಪಾಡಿ ಮತ್ತು ಏರಿಯಾಲ್‍ನಲ್ಲಿ ನಾಲ್ಕು ಚಿಕ್ಕ ಸೇತುವೆಗಳನ್ನು ನಿರ್ಮಿಸಲಾಗುವುದು.
ಹೊಸಂಗÀಡಿ ಮತ್ತು ಬಂದ್ಯೋಡಿನಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಹೊಸಂಗಡಿಯಲ್ಲಿ ನಿರ್ಮಾಣ ಪ್ರಗತಿಯಲ್ಲಿದೆ. ಕುಂಜತ್ತೂರು, ಆರಿಕ್ಕಾಡಿ, ಮೊಗ್ರಾಲ್, ವಿದ್ಯಾನಗರ ಬಿ.ಸಿ.ರೋಡ್ ಮತ್ತು ನಾಯನ್ಮೂರಮೂಲೆಯಲ್ಲಿ ಬೇಸ್ ಮೆಂಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮಂಜೇಶ್ವರ, ಉಪ್ಪಳ ಗೇಟ್, ಶಿರಿಯಾ ಕುನ್ನಿಲ್ ಮತ್ತು ಕುಂಬಳೆಯಲ್ಲಿ ನಿರ್ಮಾಣ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದೆ. ಉಪ್ಪಳ ನಯಾಬಜಾರ್, ಕೈಕಂಬ, ವಿದ್ಯಾನಗರ, ಮೊಗ್ರಾಲ್‍ಪುತ್ತೂರು, ನಾಯನ್ಮಾರಮೂಲೆನಗರ, ಸಂತೋಷ್ ನಗರಗಳಲ್ಲಿ ಇನ್ನಷ್ಟೇ ಕಾಮಗಾರಿ ನಡೆಯಲಿದೆ.
39 ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 1703 ಕೋಟಿ ಮೀಸಲಿಡಲಾಗಿದೆ.ಮೊದಲ ಭಾಗದ 600 ಕೋಟಿ ವೆಚ್ಚದ ಕಾಮಗಾರಿ ಎರಡು ಹಂತದಲ್ಲಿ ಪೂರ್ಣಗೊಳ್ಳಲಿದೆ. ತಲಪ್ಪಾಡಿಯಿಂದ ಚೆಂಗಳವರೆಗಿನ ಮೊದಲ ರೀಚ್‍ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಲು ಮತ್ತು ಇಳಿಯಲು 60 ಪ್ಲೈಓವರ್ ಇರುತ್ತದೆ. ಎರಡೂ ಬದಿಗಳಲ್ಲಿ 30-30 ಇದಿರಲಿದೆ.
ಮುಖ್ಯರಸ್ತೆಯಿಂದ ಸರ್ವಿಸ್ ರಸ್ತೆಗಳಿಗೆ ಏರಿ ಇಳಿಯುವ ಸೌಲಭ್ಯ ಕಾಯ್ದುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ. ವಿದ್ಯುತ್ ಕಂಬ-ತಂತಿಗಳನ್ನು ಬದಲಿಸಿ ಎತ್ತರ ಹೆಚ್ಚಿಸಿದರೆ ಅಥವಾ ಕಡಿಮೆ ಮಾಡಿದರೆ ಅದು ಪ್ರಯಾಣಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಈ ನಿಟ್ಟಿನಲ್ಲಿ ಹೊಸ ನಮೂನೆಯ ಬಗ್ಗೆ ವಿದ್ಯುತ್ ಇಲಾಖೆಯೂ ಚಿಂತನೆಯಲ್ಲಿದೆ.
ಅಭಿವೃದ್ದಿಯಲ್ಲಿ ಅತಿ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯಲ್ಲಿ ಇದೀಗ ನಡೆಯುತ್ತಿರುವ ರಾ.ಹೆದ್ದಾರಿಯ ನವೀನ ತಂತ್ರಜ್ಞಾನ ಆಧಾರಿತ ಕಾಮಗಾರಿಗಳು ಒಟ್ಟಿನಲ್ಲಿ ಜಿಲ್ಲೆಯ ಒಟ್ಟು ಚಹರೆಯನ್ನೇ ಬದಲಿಸಲಿದ್ದು, ಹೊಸ ವಿನ್ಯಾಸಗಳು ಒಂದಷ್ಟು ದಿನ ಜನಸಾಮಾನ್ಯರಿಗೆ ಗೊಂದಲಕ್ಕೆ ಕಾರಣವಾಗುವ ಮಧ್ಯೆ ಅಭಿವೃದ್ದಿಯ ಪಥದಲ್ಲಿ ಭರವಸೆಯಾಗುವ ನಿರೀಕ್ಷೆಯಲ್ಲಿದೆ.
ಅಭಿಮತ : ಆರು ಪಥದ ರಾ.ಹೆದ್ದಾರಿ ಕಾಮಗಾರಿಯ ಮೊದಲ ಹಂತ ಅಂತಿಮ ಘಟ್ಟದಲ್ಲಿರುವುದು ಸ್ತುತ್ಯರ್ಹ. ಕಾಮಗಾರಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ. ಆದರೆ, ಹೆದ್ದಾರಿ ರಸ್ತೆಯ ಇಕ್ಕೆಲಗಳನ್ನು ಅಜಗಜಾಂತರ ಬೇರ್ಪಡಿಸಿದ್ದು, ಆರ್ಥಿಕ ಮತ್ತು ಸಾಮಾಜಿಕ ತೊಡಕುಗಳಿಗೆ ಕಾರಣವಾಗಲಿದೆ. ಹೆದ್ದಾರಿಯ ಆರು ಕಿಲೋಮೀಟರ್ ಗಳಿಗೊಂದರಂತೆ ಅತ್ತಿತ್ತ ಸಂಚರಿಸುವ ಅಂಡರ್ ಪಾಸ್ ಗಳಿದ್ದು, ಇದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕೃಷಿಕರಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕೃತರು ಕ್ರಮ ಕೈಗೊಳ್ಳಬೇಕು.
-ವಿಕ್ರಂ ಪೈ. ಕುಂಬಳೆ.
ಅಧ್ಯಕ್ಷರು ರಾ.ಹೆದ್ದಾರಿ ಕ್ರಿಯಾ ಸಮಿತಿ ಹಾಗೂ ಅಧ್ಯಕ್ಷರು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ.