ಮುಂಬೈ: ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ ಮಾರುಕಟ್ಟೆ ಯಲ್ಲಿ ಚಿನ್ನದ ಬೆಲೆ ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ದರ ತಲುಪಿ (10 ಗ್ರಾಂ.ಗೆ ರೂ. 59,461), ದಿನದ ಅಂತ್ಯದಲ್ಲಿ 59,420 ರೂಪಾಯಿಗೆ ಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಬಂಗಾರದ ಧಾರಣೆ 60,000 ರೂ.
ದಾಟುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಮತ್ತು ಚಿನ್ನದ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಏಪ್ರಿಲ್ನ ಭವಿಷ್ಯದ ಮಾರುಕಟ್ಟೆ ಬೆಲೆಯು ಕಳೆದ ಗುರುವಾರದ ಮುಕ್ತಾಯದ ಬೆಲೆಗಿಂತಲೂ 1,414 ರೂಪಾಯಿ (ಶೇ. 2.44ರಷ್ಟು) ಹೆಚ್ಚಳಕ್ಕೆ ಸ್ಥಿರಗೊಂಡಿತು. ಏತನ್ಮಧ್ಯೆ, ಮೇ ತಿಂಗಳಿನ ಭವಿಷ್ಯದ ಬೆಳ್ಳಿ ದರವು ಶೇ. 3 ರಷ್ಟು ಏರಿಕೆಯಾಗಿ (ಪ್ರತಿ ಕೆಜಿಗೆ ರೂ 2,118) ರೂ 68,649 ಕ್ಕೆ ತಲುಪಿತು.
ಅಮೆರಿಕ ಮತ್ತು ಯೂರೋಪ್ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ನಿವಾರಣೆಯಾಗದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆಯ ಪ್ರವೃತ್ತಿಗಳು ಹಾಗೆಯೇ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭಾರತದ ಎಂಸಿಎಕ್ಸ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯು ಮುಂದಿನ ವಾರ 60,000 ರೂ.ಗಳನ್ನು ಮೀರಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ವಾರ ಬೆಲೆಬಾಳುವ ಲೋಹಗಳ ಬೆಲೆಯಲ್ಲಿ ಚಂಚಲತೆಯ ಸಾಧ್ಯತೆ ಇದೆ ಎಂದೂ ಪರಿಣತರು ಅಂದಾಜಿಸಿದ್ದಾರೆ. ಎಂಸಿಎಕ್ಸ್ ಚಿನ್ನವು ಆದಾಯದ ವಿಷಯದಲ್ಲಿ ಇತರ ಎಲ್ಲ ಆಸ್ತಿ ಹೂಡಿಕೆಗಳನ್ನು ಹಿಂದಿಕ್ಕಿದೆ. ಬಂಗಾರವು ಈ ವರ್ಷದ ಆರಂಭದಿಂದ ಇಂದಿನವರೆಗೆ ರೂ 4,366 ಅಥವಾ ಅಂದಾಜು ಶೇ. 8ರಷ್ಟು ಲಾಭ ಗಳಿಸಿದೆ. ಅಲ್ಲದೆ, ಮಾರ್ಚ್ ತಿಂಗಳಲ್ಲೇ ರೂ 3,628 ಅಥವಾ ಶೇ. 6.51ರಷ್ಟು ಲಾಭ ತಂದುಕೊಟ್ಟಿದೆ.
ನಷ್ಟ ಗುರಿಯನ್ನು 58,650 ರೂಪಾಯಿಗೆ ಹಾಗೂ ಲಾಭ ಗುರಿಯನ್ನು 60,200 ರೂಪಾಯಿಗೆ ನಿಗದಿ ಮಾಡಿಕೊಂಡು ಎಂಸಿಎಕ್ಸ್ ಏಪ್ರಿಲ್ ತಿಂಗಳ ಭವಿಷ್ಯದ ಚಿನ್ನವನ್ನು 59,200 ರೂ.ಗಳಲ್ಲಿ ಖರೀದಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಷೇರುಪೇಟೆ ಋಣಾತ್ಮಕವಾಗಿರುವ ಕಾರಣ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಗಮನ ಹರಿಸುತ್ತಿರುವುದು ಕೂಡ ಬೆಲೆ ಏರಿಕೆಗೆ ಒಂದಂಶ ಆಗಿದೆ.
ಬ್ಯಾಂಕಿಂಗ್ ಬಿಕ್ಕಟ್ಟಿನ ಅಲೆಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆಯು ಶೇ. 2ಕ್ಕಿಂತ ಹೆಚ್ಚಳ ಕಂಡಿದೆ. ಈ ಮೂಲಕ ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಮೂರು ವರ್ಷಗಳಲ್ಲಿಯೇ ಅತಿದೊಡ್ಡ ಸಾಪ್ತಾಹಿಕ ದರ ಏರಿಕೆಯು ದಾಖಲಾಯಿತು. ವಾರಾಂತ್ಯದಲ್ಲಿ ಇನ್ನಷ್ಟು ಕೆಟ್ಟ ಬ್ಯಾಂಕಿಂಗ್ ಸುದ್ದಿಗಳು ಬರಬಹುದಾಗಿದೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಮುಂದಿನ ವಾರ ಬಡ್ಡಿ ದರ ಹೆಚ್ಚಳಕ್ಕೆ ವಿರಾಮ ನೀಡುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಚಿನ್ನ ದರ ಹೆಚ್ಚುತ್ತಿದೆ. ಆರ್ಥಿಕ ಹಿಂಜರಿತ ಮತ್ತು ವಿತ್ತೀಯ ನೀತಿಯ ಮೇಲಿನ ಅನಿಶ್ಚಿತತೆ ಭೀತಿಯ ಕಾರಣ ಕಳೆದ ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬಲವಾದ ಬೇಡಿಕೆ ಪಡೆದುಕೊಂಡಿವೆ.
ಬೆಳ್ಳಿ ಫ್ಯೂಚರ್ ಬೆಲೆಯು ಈ ತಿಂಗಳ ಆರಂಭದಿಂದ ಇಂದಿನವರೆಗೆ ಶೇ. 6ರಷ್ಟು ಹೆಚ್ಚಿದೆ. ವರ್ಷಾರಂಭದಿಂದ ಇಂದಿನವರೆಗೆ ಬೆಳ್ಳಿ ಬೆಲೆಯು 912 ರೂ. ಕಡಿಮೆಯಾಗಿ ದ್ದರೆ, ಈ ತಿಂಗಳ ಆರಂಭದಿಂದ ಇಂದಿನವರೆಗೆ 3878 ರೂ. ಹೆಚ್ಚಳ ಕಂಡಿದೆ. ನಷ್ಟದ ಗುರಿಯನ್ನು 65,500 ರೂ.ಗೆ ಹಾಗೂ ಲಾಭ ಗುರಿಯನ್ನು 70,000 ರೂ.ಗೆ ನಿಗದಿ ಮಾಡಿಕೊಂಡು ಎಂಸಿಎಕ್ಸ್ ಮೇ ತಿಂಗಳ ಭವಿಷ್ಯದ ಬೆಳ್ಳಿಯನ್ನು 67,000 ರೂ.ಗೆ ಖರೀದಿಸಿ ಎಂದೂ ತಜ್ಞರು ಸಲಹೆ ನೀಡಿದ್ದಾರೆ.