ಹೆಕಾನಿ ಜಖಾಲು (Hekani Jakhalu) ಇದೀಗ ತುಂಬಾ ಟ್ರೆಂಡ್‌ನಲ್ಲಿರುವ ಹೆಸರು, ಬರೋಬರಿ 60 ವರ್ಷಗಳ ನಂತರ ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ, ಈ ಮೂಲಕ ಹೊಸ ಚರಿತ್ರೆ ಬರೆದಿದ್ದಾರೆ.
ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 183 ಅಭ್ಯರ್ಥಿಗಳಲ್ಲಿ ನಾಲ್ವರು ಮಹಿಳೆಯರೂ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಆಯ್ಕೆಯಾಗುವ ಮೂಲಕ 60 ವರ್ಷಗಳ ಬಳಿಕ ನಾಗಾಲ್ಯಾಂಡ್‌ನಲ್ಲಿ ಶಾಸಕಿಯಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆ
ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ದೀಮಾಪುರ 3 ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಈಶಾನ್ಯ ರಾಜ್ಯದಲ್ಲಿ ಮಹಿಳೆಯರ ಆಡಿಳಿತಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಈ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆ ಎಂಬುವುದಾಗಿ ಗುರುತಿಸಿಕೊಂಡಿದ್ದಾರೆ.
1977ರಲ್ಲಿ ಲೋಕಸಭೆಗೆ ಮಹಿಳೆಯೊಬ್ಬರು ಆಯ್ಕೆ ಆದ ಬಳಿಕ 60 ವರ್ಷಗಳವರೆಗೆ ಯಾವ ಮಹಿಳೆಯರಿಗೆ ಲೋಕಸಭೆಗೆ ಆಯ್ಕೆ ಆಗಲು ಸಾಧ್ಯವಾಗಿರಲಿಲ್ಲ, ಇದೀಗ 60 ವರ್ಷಗಳ ಬಳಿಕ ಶಾಸಕಿಯೊಬ್ಬರು ವಿಧಾನಸಭೆಗೆ ಪ್ರವೇಶಿಸುವಂತಾಗಿದೆ.
ಹೆಕಾನಿ ಜಖಾಲು ಬಗ್ಗೆ ಕಿರು ಪರಿಚಯ
ಹೆಕಾನಿ ಜಖಾಲು ವಕೀಲೆಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರು ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ಹಾಗೂ ದೆಹಲಿಯ ವಿಶ್ವ ವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ವಿವಿಯಿಂದ ವಕೀಲೆ ಪದವಿ ಪಡೆದ ಬಳಿಕ ದೆಹಲಿಯಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು.
ನಾರಿ ಶಕ್ತಿ ಪುರಸ್ಕಾರ
2005ರಲ್ಲಿ ನಾಗಾಲ್ಯಾಂಡ್‌ಗೆ ಮರಳಿದ ಅವರು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಳ್ಳಲಾರಂಭಿಸಿದರು. ಯೂತ್ ನೆಟ್ ಎಂಬ ಎನ್‌ಜಿಒ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ 2019ರಲ್ಲಿ ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಸಚಿವಾಲಯ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿತ್ತು. ಇದೀಗ ಶಾಸಕಿಯಾಗಿ ಆಯ್ಕೆಯಾಗಿರುವ ಹೆಕಾನಿ ಮಹಿಳಾ ಶಾಸಕಿಯಾಗಿ ಮಹಿಳೆಯರಿಗಾಗಿ ಹೋರಾಡುತ್ತೇನೆ ಎಂಬುವುದಾಗಿ ಹೇಳಿದ್ದಾರೆ. ಈ ಮೂಲಕ ಮತ್ತಷ್ಟು ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.