ನವದೆಹಲಿ: ಭಾರತೀಯ ನೌಕಾಪಡೆಗೆ ಹೆಚ್ಚುವರಿಯಾಗಿ ಬ್ರಹ್ಮೋಸ್ ಕ್ಷಿಪಣಿಗಳು ಹಾಗೂ ಸೇನೆಗೆ ಬೇಕಿರುವ ಸ್ವದೇಶಿ ನಿರ್ಮಿತ ಹೊವಿಟ್ಜರ್ ಫಿರಂಗಿಗಳು ಸೇರಿದಂತೆ ಒಟ್ಟು ₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಗುರುವಾರ ಒಪ್ಪಿಗೆ ಸೂಚಿಸಿದೆ.
ಈ ಮೊತ್ತದಲ್ಲಿ ನೌಕಾಪಡೆಗೆ ಸಿಂಹಪಾಲು ದೊರೆತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ನೌಕಾಪಡೆಗೆ ಸಂಬಂಧಿಸಿದ ₹56,000 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಿದೆ. ಬ್ರಹ್ಮೋಸ್ ಕ್ಷಿಪಣಿಗಳನ್ನು ಹೆಚ್ಚುವರಿಯಾಗಿ ಖರೀದಿಸುವುದರಿಂದ ನೌಕಾಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಾಗಲಿದೆ.
ದೇಶಿಯವಾಗಿ ಅಭಿವೃದ್ಧಿಪಡಿಸಿರುವ 155 ಎಂ.ಎಂ/52 ಕ್ಯಾಲಿಬರ್‌ನ ಅಡ್ವಾನ್ಸ್ಡ್ ಟೋವಡ್ ಆರ್ಟಿಲರಿ ಗನ್ ಸಿಸ್ಟಂ (ಎಟಿಎಜಿಎಸ್) ಖರೀದಿಗಾಗಿ ರಕ್ಷಣಾ ಸಚಿವಾಲಯವು ಸೇನೆಗೆ ಹಸಿರು ನಿಶಾನೆ ತೋರಿದೆ.
ಎಚ್‌ಎಎಲ್ ನಿರ್ಮಿತ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಎಂಕೆ-3 ಖರೀದಿಸಲು ಕರಾವಳಿ ಕಾವಲು ಪಡೆಗೆ ಅನುಮತಿ ನೀಡಲಾಗಿದೆ.