ಚಂಡೀಗಡ: ಸಿಖ್ ಮೂಲಭೂತವಾದಿ ನಾಯಕ ಅಮೃತ್‌ಪಾಲ್ ಸಿಂಗ್ ಸಂಗಡಿಗರನ್ನೆಲ್ಲ ಬಂಧಿಸಿ, ಅವನೊಬ್ಬನನ್ನೇ ಬಂಧಿಸದಿರುವುದು ಹೇಗೆ? ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪೊಲೀಸರಿಗೆ ಕೇಳಿದೆ.
ಅಮೃತ್‌ಪಾಲ್‌ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಅಮೃತ್‌ಪಾಲ್‌ನ ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ಎಂಬುವರು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಕೇಳಿದೆ.
ಒಂದು ವೇಳೆ ಅಮೃತ್‌ಪಾಲ್ ಸಿಂಗ್ ಪರಾರಿಯಾದರೇ ಇದು ಗುಪ್ತಚರ ವೈಪಲ್ಯವೇ ಸರಿ ಎಂದು ಹೇಳಿದೆ. ನೀವು 80 ಸಾವಿರ ಪೊಲೀಸ್ ಸಿಬ್ಬಂದಿ ಇದ್ದೀರಾ. ಆದರೆ, ಅವನು ಹೇಗೆ ತಪ್ಪಿಸಿಕೊಂಡ? ಇದರಿಂದ ಇಡೀ ಪೊಲೀಸ್ ಸಿಬ್ಬಂದಿಗೆ ಅವಮಾನವಲ್ಲವೇ? ಎಂದು ಅಡ್ವೊಕೇಟ್ ಜನರಲ್ ವಿನೋದ್ ಗಾಯ್ ಅವರನ್ನು ಜಸ್ಟಿಸ್ ಎನ್.ಎಸ್. ಶೇಕಾವತ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಾಯ್ ಅವರು, ಈ ರೀತಿ ಕೆಲವೊಮ್ಮೆ ಆಗುತ್ತೆ. ಅತ್ತ ಜಿ20 ಸಭೆ ಕೂಡ ನಡೆಯುತ್ತಿತ್ತು ಕೂಡ ಎಂದು ಸಮಜಾಯಿಸಿ ನೀಡಿದ್ದಾರೆ.
ಖಾರಾ ಅರ್ಜಿ ಕುರಿತಂತೆ ನ್ಯಾಯಾಲಯವು ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಇದೇ 21ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಅಮೃತ್‌ಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿಸಿರುವ ಪೊಲೀಸರು ಆತನ ಹಲವು ಬೆಂಬಲಿಗರನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಜನರ ಬಂಧನವಾಗಿದೆ. ಇವರು 'ವಾರಿಸ್ ಪಂಜಾಬ್ ದೇ' (ಡಬ್ಲ್ಯುಪಿಡಿ) ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.