ನವದೆಹಲಿ :ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಕ್ಕೆ ಮನವಿ ಮಾಡದಿದ್ದರೂ, ಬಂಡವಾಳ ಮರುಪೂರಣ ಕ್ರಮದ ಅಂಗವಾಗಿ ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) 8,800 ಕೋಟಿ ರೂಪಾಯಿಗಳನ್ನು ನೀಡಿರುವ ಪ್ರಕರಣವನ್ನು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿ ಬಹಿರಂಗಪಡಿಸಿದೆ.
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಈ ಉಲ್ಲೇಖ ಇದೆ. 2018ನೇ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವಾಲಯ ಬಂಡವಾಳ ಮರುಪೂರಣಕ್ಕೆ ಮುನ್ನ ತನ್ನ ನೀತಿಗೆ ವಿರುದ್ಧವಾಗಿ ಬಂಡವಾಳ ಅಗತ್ಯತೆಯ ಮೌಲ್ಯಮಾಪನ ಕೈಗೊಂಡಿಲ್ಲ ಎಂದು ಸಿಎಜಿ ಅನುಸರಣಾ ಪರಿಶೋಧನಾ ವರದಿ ಆಕ್ಷೇಪಿಸಿದೆ.
"ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಸಾಲದ ಬೆಳವಣಿಗೆಯನ್ನು ಪರಿಗಣಿಸಿ, ಬ್ಯಾಂಕ್ ಯಾವುದೇ ಬೇಡಿಕೆ ಸಲ್ಲಿಸದಿದ್ದರೂ, ಡಿಎಫ್‌ಎಸ್ 2017-18ನೇ ಹಣಕಾಸು ವರ್ಷದಲ್ಲಿ 8,800 ಕೋಟಿ ರೂಪಾಯಿಗಳನ್ನು ನೀಡಿದೆ. ಡಿಎಫ್‌ಎಸ್, ನಿಗದಿತ ಕ್ರಮದಂತೆ ಬಂಡವಾಳ ಮರುಪೂರಣಕ್ಕೆ ಮುನ್ನ ಬಂಡವಾಳ ಅಗತ್ಯತೆಯ ಅಂದಾಜಿಸುವಿಕೆಯನ್ನೂ ಮಾಡಿಲ್ಲ" ಎಂದು ವರದಿ ಸ್ಪಷ್ಟಪಡಿಸಿದೆ.
ಸಾರ್ವಜನಿಕ
ವಲಯದ ಬ್ಯಾಂಕ್‌ಗಳಿಗೆ ಬಂಡವಾಳ ಮರಪೂರಣದ ವೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)
ನಿಗದಿಪಡಿಸಿದ ನಿಯಮಾವಳಿಯನ್ನು ಕೂಡಾ ಡಿಎಫ್‌ಎಸ್ ಕಡೆಗಣಿಸಿದೆ ಎಂದು ವರದಿ
ವಿವರಿಸಿದೆ. "ಭಾರತದಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚುವರಿ ಶೇಕಡ 1ರ ಬಂಡವಾಳ ಅಗತ್ಯತೆ
ವಿಸ್ತರಣೆಯನ್ನು ಆರ್‌ಬಿಐ ನಿಗದಿಪಡಿಸಿತ್ತು. ಪರಿಣಾಮವಾಗಿ 7785.81 ಕೋಟಿ ರೂಪಾಯಿ
ಹೆಚ್ಚುವರಿ ಮರುಪೂರಣ ಮಾಡಲಾಗಿದೆ" ಎಂದು ಹೇಳಿದೆ.
2019-20ನೇ ಹಣಕಾಸು ವರ್ಷದಲ್ಲಿ
ಬ್ಯಾಂಕ್ ಆಫ್ ಮಹಾರಾಷ್ಟ್ರ 798 ಕೋಟಿ ರೂಪಾಯಿಗೆ ಬೇಡಿಕೆ ಸಲ್ಲಿಸಿದರೆ, 831 ಕೋಟಿ
ರೂಪಾಯಿಗಳನ್ನು ಡಿಎಫ್‌ಎಸ್ ಮರುಪೂರಣ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.