ನವದೆಹಲಿ: ಪ್ರತಿಪಕ್ಷಗಳು ಮಾತುಕತೆಗೆ ಮುಂದಾದರೆ ಸಂಸತ್ತ್ ಕಲಾಪ ಬಿಕ್ಕಟ್ಟನ್ನು ಪರಿಹರಿಸಬಹುದು. ಅವರು ಎರಡು ಹೆಜ್ಜೆ ಮುಂದೆ ಬರಬೇಕು. ನಾವೂ ಎರಡು ಹೆಜ್ಜೆ ಮುಂದೆ ಹೋಗುತ್ತೇವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ ಅವರು, ರಾಜಕೀಯಕ್ಕಿಂತ ಮೇಲಾದ ವಿಷಯಗಳಿವೆ. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಕೂಡ ವಿದೇಶಿ ನೆಲದಲ್ಲಿ ದೇಶದ ರಾಜಕೀಯದ ಬಗ್ಗೆ ಚರ್ಚಿಸಲು ನಿರಾಕರಿಸಿದ್ದರು. ಸಂಸತ್ತಿನಲ್ಲಿ ಸೃಷ್ಟಿಯಾಗಿರುವ ಕೋಲಾಹವನ್ನು ಪರಿಹರಿಸಲು ಸರ್ಕಾರ ಮತ್ತು ಪ್ರತಿಪಕ್ಶಗಳು ಎರಡೂ ಸಭಾಧ್ಯಕ್ಷರ ಮುಂದೆ ಕುಳಿತು ಚರ್ಚಿಸಬೇಕು. ಅವರು ಎರಡು ಹೆಜ್ಜೆ ಮುಂದೆ ಬರಬೇಕು. ನಾವೂ ಎರಡು ಹೆಜ್ಜೆ ಮುಂದೆ ಹೋಗುತ್ತೇವೆಂದು. ಆಗ ಸಂಸತ್ತು ಸುಗಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರೆ, ಏನೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಕೇವಲ ಖಜಾನೆ ಅಥವಾ ವಿರೋಧ ಪಕ್ಷಗಳಿಂದ ಸಂಸದೀಯ ವ್ಯವಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದ್ದರೂ, ವಿರೋಧ ಪಕ್ಷಗಳು ಸಿದ್ಧರಿಲ್ಲ. ನಾವು ಯಾರೊಂದಿಗೆ ಮಾತನಾಡಬೇಕು. ಅವರು ಮಾಧ್ಯಮಗಳ ಮುಂದೆ ಕುಳಿತು ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಬಂದು ವಾಕ್ ಸ್ವಾತಂತ್ರ್ಯ ಬೇಕೆಂದು ಘೋಷಣೆ ಕೂಗುತ್ತಾರೆ. ಅವರಿಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯವಿದೆ. ಸಂಸತ್ತಿನಲ್ಲಿ ನೀವು ಮಾತನಾಡುವುದನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರತೀಯೊಬ್ಬರೂ ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳನ್ನು ಅಧ್ಯಯನ ಮಾಡಬೇಕು. ಅರ್ಥ ಮಾಡಿಕೊಳ್ಳಬೇಕು. ಸಂಸತ್ತಿನಲ್ಲಿ ಚರ್ಚೆಗಳು ನಿಯಮಾನುಸಾರ ನಡೆಯುತ್ತವೆ, ರಸ್ತೆಯಲ್ಲಿ ಮಾತನಾಡುವ ಹಾಗೆ ಸಂಸತ್ತಿನಲ್ಲಿ ಮಾತನಾಡುವಂತಿಲ್ಲ. ಈ ಮೂಲಭೂತ ಪರಿಕಲ್ಪನೆ ಅವರಿಗಿಲ್ಲ ಎಂದಾದರೆ, ನಾವು ಅನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಸಂಸತ್ತು ಕೆಲವು ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆ ನಿಯಮಗಳನ್ನು ಪ್ರಸ್ತುತ ಸರ್ಕಾರ ರೂಪಿಸಿಲ್ಲ."ಈ ನಿಯಮಗಳು ಅವರ ಅಜ್ಜಿ ಅಥವಾ ತಂದೆಯ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಅವರುೂ ಕೂಡ ಈ ನಿಯಮಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಈ ನಿಯಮಗಳನ್ನೇ ನಾವೂ ನಡೆದುಕೊಳ್ಳುತ್ತಿದ್ದೇವೆ.
"ಅವರಿಗೆ ನಿಯಮಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಯಾರೂ ಯಾವಾಗ ಬೇಕಾದರೂ ಎದ್ದು ನಿಂತು ಮಾತನಾಡಲು ಸಾಧ್ಯವಿಲ್ಲ. ಅದಕ್ಕೆ ಕೆಲ ನಿಯಮಗಳಿವೆ. ನೀವು ಆ ನಿಯಮಗಳನ್ನು ಅನುಸರಿಸಬೇಕು. ಇದರಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಎರಡು ನಿದರ್ಶನಗಳನ್ನು ಉಲ್ಲೇಖಿಸಿದ ಅಮಿತ್ ಶಾ, ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಅವರು ಇಂಗ್ಲೆಂಡ್‌ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಷಾ ಆಯೋಗವನ್ನು ರಚಿಸಲಾಯಿತು ಮತ್ತು ಅವರನ್ನು ಜೈಲಿಗೆ ಹಾಕುವ ಪ್ರಯತ್ನಗಳು ನಡೆದಿದ್ದವು. ವಿದೇಶದ ನೆಲದ ಕೆಲವು ಪತ್ರಕರ್ತರು ಇಂದಿರಾ ಗಾಂಧಿ ಅವರನ್ನು ನಿಮ್ಮ ದೇಶವು ಹೇಗಿದೆ ಎಂದು ಕೇಳಿದ್ದರು. ಈ ವೇಳೆ ಉತ್ತರಿಸಿದ್ದ ಇಂದಿರಾ ಗಾಂಧಿಯವರು, ನಮ್ಮಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ, ನಾನು ಇಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.
ನನ್ನ ದೇಶವು ಚೆನ್ನಾಗಿ ನಡೆಯುತ್ತಿದೆ. ದೇಶದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಇಲ್ಲಿ ನಾನು ಭಾರತೀಯಳು" ಎಂದು ಇಂದಿರಾ ಗಾಂಧಿಯವರು ಹೇಳಿದ್ದನ್ನು ಉಲ್ಲೇಖಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿರೋಧ ಪಕ್ಷದಲ್ಲಿದ್ದರು ಮತ್ತು ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಮತ್ತು ಕಾಶ್ಮೀರದ ಬಗ್ಗೆ ಚರ್ಚೆಯಾಗಿರುವುದರಿಂದ ಭಾರತದ ನಿಯೋಗವನ್ನು ಮೊದಲ ಮತ್ತು ಕೊನೆಯ ಬಾರಿಗೆ ವಿರೋಧ ಪಕ್ಷದ ನಾಯಕ ವಾಜಪೇಯಿ ನೇತೃತ್ವ ವಹಿಸಿದ್ದರು. ಇಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ. ಪ್ರತಿಯೊಬ್ಬರೂ ಈ ಸಂಪ್ರದಾಯವನ್ನು ಅನುಸರಿಸಬೇಕು ಎಂಬುದನ್ನು ನಾನು ನಂಬುತ್ತೇನೆ.
ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ಆರೋಪ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ವಿದೇಶಗಳಲ್ಲಿ ಟೀಕೆ ಮಾಡಬೇಕೇ? ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಹೇಳಿದರು.
ಇದೇ ವೇಳೆ ಅದಾನಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರಕ್ಕೆ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂಕೋರ್ಟ್ ಈಗಾಗಲೇ ತನಿಖೆಗಾಗಿ ಸಮಿತಿಯನ್ನು ರಚನೆ ಮಾಡಿದೆ. ಜನರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು ಎಂದು ತಿಳಿಸಿದರು.
ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದಾಗಿ ಸಂಸತ್ತಿನ ಬಜೆಟ್ ಅಧಿವೇಶನದ ಸಂಪೂರ್ಣವಾಗಿ ಬಲಿಯಾಗುತ್ತಿದೆ.
ಲಂಡನ್‌ನಲ್ಲಿ ನೀಡಿದ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದರೆ, ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಲಂಡನ್‌ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಭಾರತೀಯ ಪ್ರಜಾಪ್ರಭುತ್ವದ ರಚನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಕೇಂದ್ರ ಸಂಸ್ಥೆಗಳ ಮೇಲೆ "ಪೂರ್ಣ ಪ್ರಮಾಣದ ಆಕ್ರಮಣ" ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಈ ಹೇಳಿಕೆಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತವನ್ನು ದೂಷಿಸುತ್ತಿದ್ದಾರೆ ಮತ್ತು ವಿದೇಶಿ ಹಸ್ತಕ್ಷೇಪಗಳನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯ ವಿಚಾರದ ಕುರಿತು ಮಾತನಾಡಿದ್ದನ್ನು ಉಲ್ಲೇಖಿಸುತ್ತಿರುವ ಕಾಂಗ್ರೆಸ್, ಆಡಳಿತ ಪಕ್ಷಕ್ಕೆ ತಿರುಗೇಟು ನೀಡುತ್ತಿದೆ.