ಭೋಪಾಲ್: ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ನಡೆದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ಚಿತ್ರದ ಎದುರು ಬಿಕಿನಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಈ ಬಗ್ಗೆ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.
ದೇಹದಾಢ್ಯ ಸ್ಫರ್ಧೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್‌ನ ಮೇಯರ್ (ಬಿಜೆಪಿ) ಪ್ರಹ್ಲಾದ್ ಪಟೇಲ್ ಆಯೋಜಿಸಿದ್ದರು. ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದಾದ ಬಳಿಕ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ.
ಈ ಘಟನೆಯಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಿಡಿಯಾಗಿದ್ದು, ಕಾರ್ಯಕ್ರಮ ನಡೆದ ಸ್ಥಳವನ್ನು ಗಂಗಾಜಲ ಹಾಕಿ ಶುದ್ಧೀಕರಿಸಿದ್ದಾರೆ. ಹನುಮಾನ್ ಚಾಲೀಸ ಪಠಿಸಿದ್ದಾರೆ. ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು ಇದು ಹನುಮಂತ ದೇವರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.
ಈ ಘಟನೆ ಬಳಿಕ ಕಿಡಿ ಕಾರಿರುವ ಕಾಂಗ್ರೆಸ್, ಈ ಕಾರ್ಯಕ್ರಮ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ. ಇದು ದೇವರಿಗೆ ಮಾಡಿರುವ ಅವಮಾನ, ಈ ಕೂಡಲೇ ಕಾರ್ಯಕ್ರಮದ ಆಯೋಜಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.