ನವದೆಹಲಿ/ವಾರಾಣಸಿ: ಜಗತ್ತಿನಿಂದ ಕ್ಷಯ ರೋಗವನ್ನು ಸಂಪೂರ್ಣ ಕೊನೆಗಾಣಿಸಲು ಸರ್ಕಾರ ಮತ್ತು ಇಡೀ ಸಮಾಜ ತೀವ್ರ ಗಮನ ಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ಕರೆ ನೀಡಿದೆ.
ವಿಶ್ವ ಕ್ಷಯರೋಗ ದಿನದಂದು ಡಬ್ಲ್ಯುಎಚ್‌ಒ ನೀಡಿರುವ ಈ ಜಾಗತಿಕ ಸಂದೇಶವು, ಕ್ಷಯ ರೋಗದ ಸಂಪೂರ್ಣ ನಿರ್ಮೂಲನೆಗಾಗಿ ಹೊಸ ಆವಿಷ್ಕಾರಗಳು ಮತ್ತು ಹೊಸ ಶಿಫಾರಸುಗಳ ತುರ್ತು ಅಗತ್ಯ, ಉನ್ನತ ಮಟ್ಟದ ನಾಯಕತ್ವ ಹಾಗೂ ಹೂಡಿಕೆಗಳ ಬಲಪಡಿಸುವಿಕೆ ತ್ವರಿತಗೊಳಿಸಬೇಕಿರುವುದನ್ನು ಎತ್ತಿ ತೋರಿಸಿದೆ.
ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್, ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆಗೊಳಿಸುವತ್ತ ಜಗತ್ತು ಸಾಗುತ್ತಿದ್ದು, ಈ ಗುರಿ ಸಾಧನೆ ಇನ್ನು ಕೆಲವೇ ವರ್ಷಗಳಲ್ಲಿ ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.
ಆಗ್ನೇಯ ಏಷ್ಯಾವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳಿರುವ ಪ್ರದೇಶವೆನಿಸಿದೆ. ವಿಶ್ವದ ಒಟ್ಟು ಕ್ಷಯ ರೋಗಿಗಳಲ್ಲಿ ಶೇ 45ರಷ್ಟು ರೋಗಿಗಳು ಈ ಪ್ರದೇಶದಲ್ಲೇ ಇದ್ದಾರೆ. ಕೋವಿಡ್ 19 ಸಾಂಕ್ರಾಮಿಕದಿಂದ ಕ್ಷಯ ರೋಗಿಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಉಲ್ಬಣಿಸಲಿದೆ ಎಂದು ಡಬ್ಲ್ಯುಎಚ್‌ಒ ಅಂದಾಜಿಸಿದೆ.
ಕ್ಷಯ ನಿರ್ಮೂಲನೆಯ ಕ್ರಮಗಳಿಗೆ ಮೋದಿ ಚಾಲನೆ: ಭಾರತದ 'ವಸುದೈವ ಕುಟುಂಬಕಂ' ಸಿದ್ಧಾಂತವು ಆಧುನಿಕ ಜಗತ್ತಿಗೆ ಸಮಗ್ರ ದೃಷ್ಟಿಕೋನ ಮತ್ತು ಪರಿಹಾರಗಳನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ವಿಶ್ವ ಕ್ಷಯ ದಿನದಂದು ಕ್ಷಯ ರೋಗ ಕುರಿತ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, 2025ರ ವೇಳೆಗೆ ಕ್ಷಯ ರೋಗ ಸಂಪೂರ್ಣ ನಿರ್ಮೂಲನೆಗೆ ದೇಶವು ಕಾರ್ಯತತ್ಪರವಾಗಿದೆ ಎಂದರು.